Raichur | ಕೃಷಿ ಅಧಿಕಾರಿ ನೇಮಕಾತಿಯಲ್ಲಿ ನಿಯಮ ಉಲ್ಲಂಘನೆ ಆರೋಪ; ಸರ್ಕಾರದ ವಿರುದ್ಧ ಕೃಷಿ ವಿದ್ಯಾರ್ಥಿಗಳ ಆಕ್ರೋಶ

ರಾಯಚೂರು : ಕೃಷಿ ಇಲಾಖೆ ಕೃಷಿ ಅಧಿಕಾರಿ (AO) ಹಾಗೂ ಸಹಾಯಕ ಕೃಷಿ ಅಧಿಕಾರಿ (AAO) ನೇಮಕಾತಿಯಲ್ಲಿ ಸಿ & ಆರ್ (Cadre and Recruitment) ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ ರಾಜ್ಯದ ಸರ್ಕಾರಿ ಕೃಷಿ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಏಳನೇ ದಿನಕ್ಕೆ ಕಾಲಿಟ್ಟಿದ್ದರೂ ಸರ್ಕಾರ ಯಾವುದೇ ಸ್ಪಂದನೆ ನೀಡಿಲ್ಲ ಎಂದು ಕೃಷಿ ವಿದ್ಯಾರ್ಥಿ ಮುಖಂಡ ಶಿವಪ್ಪ ಆರೋಪಿಸಿದರು.
ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಎಲ್ಲಾ ಸರ್ಕಾರಿ ಕೃಷಿ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು, ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೂ ಹೋರಾಟದಲ್ಲಿ ತೊಡಗಿದ್ದಾರೆ. ಆದರೂ ಸರ್ಕಾರ ವಿದ್ಯಾರ್ಥಿಗಳ ನ್ಯಾಯಸಮ್ಮತ ಬೇಡಿಕೆಗಳನ್ನು ನಿರ್ಲಕ್ಷಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕರ್ನಾಟಕ ಕೃಷಿ ಸೇವೆಗಳ ಸಿ & ಆರ್ ನಿಯಮಗಳು ಸ್ಪಷ್ಟವಾಗಿದ್ದರೂ ನೇಮಕಾತಿ ಪ್ರಕ್ರಿಯೆ ಮಧ್ಯದಲ್ಲೇ ಅರ್ಹತಾ ಮಾನದಂಡಗಳನ್ನು ಬದಲಾಯಿಸಿ ಖಾಸಗಿ ರೈ ಟೆಕ್ನಾಲಜಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಿರುವುದು ಸುಪ್ರೀಂ ಕೋರ್ಟ್ ತೀರ್ಪು ಹಾಗೂ ಸಂವಿಧಾನದ ವಿಧಿ 309ರ ಆಶಯಕ್ಕೆ ವಿರುದ್ಧವಾಗಿದೆ ಎಂದು ಆರೋಪಿಸಿದರು.
ಸರ್ಕಾರಿ ಕೃಷಿ ವಿಶ್ವವಿದ್ಯಾಲಯಗಳ ಅಧೀನದಲ್ಲಿ ಖಾಸಗಿ ಕೃಷಿ ಕಾಲೇಜುಗಳಿಗೆ ಹೆಚ್ಚುತ್ತಿರುವ ಸಂಯೋಜನೆಯಿಂದ ಕೃಷಿ ಶಿಕ್ಷಣ ವ್ಯಾಪಾರೀಕರಣವಾಗುತ್ತಿದ್ದು, ರೈತರ ಮಕ್ಕಳಿಗೆ ಉನ್ನತ ಶಿಕ್ಷಣ ದುಬಾರಿಯಾಗುತ್ತಿದೆ. ಹೊಸ ಖಾಸಗಿ ಕೃಷಿ ಕಾಲೇಜುಗಳಿಗೆ ಸಂಯೋಜನೆ ನೀಡುವುದನ್ನು ತಕ್ಷಣ ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿದರು.
ಕೃಷಿ ಇಲಾಖೆಯ AO ಹಾಗೂ AAO ಹುದ್ದೆಗಳಿಗೆ ಬಿ.ಇ. ಬಯೋಟೆಕ್ನಾಲಜಿ ಪದವೀಧರರಿಗೆ ಅವಕಾಶ ನೀಡಿರುವ ಸರ್ಕಾರದ ಆದೇಶವನ್ನು ಹಿಂಪಡೆಯಬೇಕು. ಕೃಷಿ ವಿಷಯದಲ್ಲಿ ಪರಿಣತಿ ಇಲ್ಲದವರಿಗೆ ಕೃಷಿ ಇಲಾಖೆಯ ಜವಾಬ್ದಾರಿ ನೀಡುವುದು ರೈತರ ಹಿತಾಸಕ್ತಿಗೆ ವಿರುದ್ಧವಾಗಲಿದೆ ಎಂದು ಹೇಳಿದರು.
ಡೇಸಿ (DAESI) ಕೋರ್ಸ್ ರೈತರಿಗೆ ಹಾನಿಕಾರಕವಾಗಿದ್ದು, ಕೇವಲ ಪ್ರಮಾಣಪತ್ರದ ಆಧಾರದ ಮೇಲೆ ಕೀಟನಾಶಕ ಹಾಗೂ ರಸಗೊಬ್ಬರ ಮಾರಾಟಕ್ಕೆ ಅವಕಾಶ ನೀಡುವುದು ಕೃಷಿ ಕ್ಷೇತ್ರಕ್ಕೆ ಅಪಾಯಕಾರಿಯಾಗಿದೆ. ಆದ್ದರಿಂದ ಈ ಕೋರ್ಸ್ ಅನ್ನು ಕೂಡಲೇ ರದ್ದುಪಡಿಸಬೇಕು ಎಂದು ಆಗ್ರಹಿಸಿದರು.
ಸರ್ಕಾರ ಶೀಘ್ರವೇ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ರಾಜ್ಯದ ಎಲ್ಲಾ ಕೃಷಿ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳನ್ನು ಒಗ್ಗೂಡಿಸಿ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸುವುದರ ಜೊತೆಗೆ ಅಗತ್ಯವಿದ್ದರೆ ಕಾನೂನು ಹೋರಾಟಕ್ಕೂ ಮುಂದಾಗುವುದಾಗಿ ಶಿವಪ್ಪ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಅಂಕೇಶ್ ನಿರ್ಮಿತ್, ಜ್ಯೋತಿ, ಸಿದ್ದಯ್ಯ ಸೇರಿದಂತೆ ಹಲವು ಕೃಷಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.






