Raichur | ಗಣೇಶನ ವಿಗ್ರಹ ಸಾಗಿಸುವ ವೇಳೆ ವಿದ್ಯುತ್ ಅವಘಡ; ಯುವಕ ಮೃತ್ಯು

ಸಿರವಾರ : ಗಣೇಶನ ವಿಗ್ರಹ ಸಾಗಿಸುವ ವೇಳೆ ವಿದ್ಯುತ್ ಅವಘಡ ಸಂಭವಿಸಿ ಯುವಕನೊಬ್ಬ ಮೃತಪಟ್ಟಿರುವ ಘಟನೆ ಜಿಲ್ಲೆಯ ಸಿರವಾರ ತಾಲೂಕಿನ ಅತ್ತನೂರು ಗ್ರಾಮದಲ್ಲಿ ಇಂದು ಬೆಳಗಿನ ಜಾವ ನಡೆದಿದೆ.
ಮೃತ ಯುವಕನನ್ನು ಸಿರವಾರ ಪಟ್ಟಣದ ವಿದ್ಯಾನಗರದ ನಿವಾಸಿ ಪ್ರೇಮ್ (26) ಎಂದು ಗುರುತಿಸಲಾಗಿದೆ.
ಹೈದ್ರಾಬಾದ್ ನಿಂದ ಸಿರವಾರ ಪಟ್ಟಣಕ್ಕೆ ಗಣೇಶನ ಮೂರ್ತಿಯನ್ನು ತೆಗೆದುಕೊಂಡು ಹೋಗುವ ವೇಳೆ ಈ ಅವಘಡ ಸಂಭವಿಸಿದೆ. ಗಣೇಶ ವಿಗ್ರಹಕ್ಕೆ ವಿದ್ಯುತ್ ಲೈನ್ ಸಿಕ್ಕಿಕೊಂಡ ಪರಿಣಾಮ ವಿದ್ಯುತ್ ತಂತಿ ತುಂಡಾಗಿ ಯುವಕನ ಮೇಲೆ ಬಿದ್ದು ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಕೂಡಲೇ ಜೊತೆಯಲ್ಲಿದ್ದ ಸ್ನೇಹಿತರು ಯುವಕನನ್ನು ಆಸ್ಪತ್ರೆಗೆ ದಾಖಲಿಸುವ ವೇಳೆ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಸಿರವಾರ ಸಿಪಿಐ ಶಶಿಕಾಂತ ಎಂ.ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Next Story




