Raichur | ಹಿಂಗಾರು ಜೋಳದ 130 ಕೋಟಿ ರೂ. ಬಾಕಿ ಹಣ ಬಿಡುಗಡೆಗೆ ಆಗ್ರಹಿಸಿ ನಾಳೆ ರಸ್ತೆ ತಡೆ : ಅಮೀನ್‌ಪಾಷಾ ದಿದ್ದಿಗಿ

ರಾಯಚೂರು: ಜಿಲ್ಲೆಯ ವಿವಿಧ ಖರೀದಿ ಕೇಂದ್ರಗಳಿಗೆ ಹಿಂಗಾರು ಜೋಳ ಮಾರಾಟ ಮಾಡಿ ಒಂದು ವರ್ಷ ಕಳೆದರೂ ರೈತರ ಖಾತೆಗಳಿಗೆ ಹಣ ಜಮೆಯಾಗದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 15ರಂದು ಮಾನ್ವಿ ತಾಲೂಕಿನ ಪೋತ್ನಾಳ ಗ್ರಾಮದಲ್ಲಿ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಅಮೀನ್‌ಪಾಷಾ ದಿದ್ದಿಗಿ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ 5 ಸಾವಿರಕ್ಕೂ ಹೆಚ್ಚು ರೈತರಿಗೆ ಸುಮಾರು 130 ಕೋಟಿ ರೂ. ಜೋಳದ ಹಣ ಬಾಕಿಯಿದೆ. ಜೋಳ ಖರೀದಿಸಿದ 15 ದಿನಗಳೊಳಗೆ ಹಣ ಪಾವತಿಸುವುದಾಗಿ ಸರ್ಕಾರ ಭರವಸೆ ನೀಡಿದ್ದರೂ, ಒಂದು ವರ್ಷ ಕಳೆದರೂ ರೈತರಿಗೆ ಹಣ ಸಿಗದಿರುವುದು ಸರ್ಕಾರದ ವೈಫಲ್ಯ ಎಂದು ಆರೋಪಿಸಿದರು.
ಹಣ ಪಾವತಿಯಾಗದ ಕಾರಣ ರೈತರು ಕೃಷಿ ವೆಚ್ಚ ಭರಿಸುವುದಕ್ಕೂ, ಕುಟುಂಬದ ಅಗತ್ಯಗಳನ್ನು ಪೂರೈಸುವುದಕ್ಕೂ ಸಂಕಷ್ಟ ಎದುರಿಸುತ್ತಿದ್ದಾರೆ. ರೈತರ ಉತ್ಪನ್ನ ಖರೀದಿಸಿದ ಬಳಿಕ ನಿಗದಿತ ಅವಧಿಯಲ್ಲಿ ಹಣ ಪಾವತಿಸುವುದು ಸರ್ಕಾರದ ಜವಾಬ್ದಾರಿಯಾಗಿದ್ದು, ಅಧಿಕಾರಿಗಳು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಬಾಕಿ ಇರುವ 130 ಕೋಟಿ ರೂ. ಹಣವನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಸರ್ಕಾರ ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಸೆ.15ರಂದು ಪೋತ್ನಾಳ ಗ್ರಾಮದಲ್ಲಿ ರಾಜ್ಯ ಹೆದ್ದಾರಿ ತಡೆದು ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ರೈತ ಸಂಘ ಎಚ್ಚರಿಕೆ ನೀಡಿದೆ.
ಸುದ್ದಿಗೋಷ್ಠಿಯಲ್ಲಿ ರಾಮನಗೌಡ, ರಾಜಶೇಖರಗೌಡ, ನಾಗನಗೌಡ, ಯಲ್ಲಪ್ಪ ಪೋತ್ನಾಳ ಸೇರಿದಂತೆ ರೈತ ಸಂಘದ ಪದಾಧಿಕಾರಿಗಳು ಹಾಗೂ ರೈತರು ಉಪಸ್ಥಿತರಿದ್ದರು.






