ರಾಯಚೂರು | ಡಿ.21ರಂದು ಪಂಡಿತ ಸಿದ್ದರಾಮ ಜಂಬಲದಿನ್ನಿ ಅವರ 37ನೇ ಪುಣ್ಯಸ್ಮರಣೆ; ಸಂಗೀತ ಸಮ್ಮೇಳನ : ನರಸಿಂಹಲು ವಡವಾಟಿ

ರಾಯಚೂರು: ಸ್ವರ ಸಂಗಮ ಸಂಗೀತ ವಿದ್ಯಾ ಸಂಸ್ಥೆಯ ವತಿಯಿಂದ ಪಂಡಿತ ಸಿದ್ದರಾಮ ಜಂಬಲದಿನ್ನಿಯವರ 37ನೇ ವರ್ಷದ ಪುಣ್ಯಸ್ಮರಣೆಯ ಅಂಗವಾಗಿ ಡಿ.21ರಂದು ಸಂಜೆ 6 ಗಂಟೆಗೆ ನಗರದ ವಿದ್ಯಾನಗರದಲ್ಲಿರುವ ಸ್ವರ ಸಂಗಮ ಸಂಗೀತ ವಿದ್ಯಾ ಸಂಸ್ಥೆಯಲ್ಲಿ ಸಂಗೀತ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಹಾಗೂ ಅಂತರಾಷ್ಟ್ರೀಯ ಖ್ಯಾತಿಯ ಕ್ಲಾರಿಯೋನೆಟ್ ವಾದಕ ಪಂಡಿತ ನರಸಿಂಹಲು ವಡವಾಟಿ ತಿಳಿಸಿದ್ದಾರೆ.
ಅವರು ಶುಕ್ರವಾರ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಸಂಗೀತ ಸಮ್ಮೇಳನದ ಸಾನಿಧ್ಯವನ್ನು ಕಿಲ್ಲೆ ಬೃಹನ್ಮಠದ ಶ್ರೀ ಶಾಂತಮಲ್ಲ ಶಿವಾಚಾರ್ಯರು ಹಾಗೂ ಸೋಮವಾರಪೇಟೆ ಹೀರೆಮಠದ ಶ್ರೀ ಅಭಿನವ ರಾಚೋಟಿ ವೀರ ಶಿವಾಚಾರ್ಯರು ವಹಿಸಲಿದ್ದಾರೆ ಎಂದರು. ಕಾರ್ಯಕ್ರಮವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ಪುಟ್ಟಮಾದಯ್ಯ ಉದ್ಘಾಟಿಸಲಿದ್ದು, ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಅಧ್ಯಕ್ಷ ಚಂದ್ರಶೇಖರ ಪಾಟೀಲ್ ಮಿರ್ಜಾಪುರ ಅವರು ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಡಾ. ಶಿವಪ್ರಸಾದ ಜಂಬಲದಿನ್ನಿ, ಓಪೆಕ್ ಆಸ್ಪತ್ರೆಯ ವಿಶೇಷಾಧಿಕಾರಿ ಡಾ. ರಮೇಶ್ ಪಿ. ಸಾಗರ್, ಕಾಂಗ್ರೆಸ್ ಮುಖಂಡ ರವಿ ಬೋಸರಾಜ್ ಹಾಗೂ ಕಲಾ ಸಂಕುಲ ಸಂಸ್ಥೆ ಅಧ್ಯಕ್ಷೆ ರೇಖಾ ಬಡಿಗೇರ ಆಗಮಿಸಲಿದ್ದಾರೆ. ಈ ಸಂದರ್ಭದಲ್ಲಿ ಕರ್ನಾಟಕ ಮಾಹಿತಿ ಆಯೋಗದ ಆಯುಕ್ತ ಬಿ. ವೆಂಕಟಸಿಂಗ್ ಅವರನ್ನು ಸನ್ಮಾನಿಸಿ ಗೌರವಿಸಲಾಗುತ್ತದೆ ಎಂದು ತಿಳಿಸಿದರು.
ಸಂಗೀತ ಸಮ್ಮೇಳನದಲ್ಲಿ ದೆಹಲಿಯ ಖ್ಯಾತ ವೈಯಲಿನ್ ವಾದಕ ಪಂಡಿತ ಸಂತೋಷ್ ನಹಾರ್, ವಡವಾಟಿ ಶಾರದಾ ಭರತ್, ಹೈದರಾಬಾದ್‌ನ ಪವನ ಅವರ ತಬಲಾ ಸೋಲೋ, ಕಲ್ಕತ್ತಾದ ಪ್ರಣಮಿತ್ ರಾಯ ಹಾಗೂ ಕೃಷ್ಣ ಮುಖೇಡ್ಕರ್ ಅವರಿಂದ ಗಾಯನ ಕಾರ್ಯಕ್ರಮಗಳು ನಡೆಯಲಿವೆ. ತಬಲಾದಲ್ಲಿ ವಿಶ್ವನಾಥ ನಾಕೋಡ, ಹಾರ್ಮೋನಿಯಂನಲ್ಲಿ ಹರಿಕೃಷ್ಣ ಹಾಗೂ ಕೋಪ್ರೇಶ್ ದೇಸಾಯಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಕೊನೆಯಲ್ಲಿ ಸ್ವರ ಸಂಗಮ ಸಂಗೀತ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳಿಂದ ಗುರುವಂದನೆ ಹಾಗೂ ಪಂಡಿತ ನರಸಿಂಹಲು ವಡವಾಟಿಯವರಿಂದ ಮಂಗಲ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ನಿವೃತ್ತ ಇಂಜಿನಿಯರ್ ಶಂಕರ ನಾರಾಯಣ ಅವರು, ಗುರುಗಳ ಪುಣ್ಯಸ್ಮರಣೆಯ ಅಂಗವಾಗಿ ಕಳೆದ 37 ವರ್ಷಗಳಿಂದ ನಿರಂತರವಾಗಿ ಸಂಗೀತ ಸಮ್ಮೇಳನ ಆಯೋಜಿಸುತ್ತಿರುವ ಪಂಡಿತ ನರಸಿಂಹಲು ವಡವಾಟಿಯವರ ಸೇವೆ ಮಾದರಿಯಾಗಿದೆ. ಇಲ್ಲಿ ಮಕ್ಕಳಿಗೆ ಸಂಗೀತದ ಜೊತೆಗೆ ಸಂಸ್ಕೃತಿ ಮತ್ತು ಸಂಸ್ಕಾರಗಳ ಬಗ್ಗೆ ಉತ್ತಮ ತರಬೇತಿ ನೀಡಲಾಗುತ್ತಿದೆ ಎಂದು ಪ್ರಶಂಸಿಸಿದರು.







