ರಾಯಚೂರು | ಅಕ್ರಮವಾಗಿ ಸಂಗ್ರಹಿಸಿದ 420 ಜೋಳದ ಚೀಲ ವಶ; ಪ್ರಕರಣ ದಾಖಲು

ರಾಯಚೂರು : ಜಿಲ್ಲೆಯ ಸಿಂಧನೂರು ತಾಲೂಕಿನ ಅಮರಾಪುರ ಗ್ರಾಮದಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಸುಮಾರು 420 ಜೋಳದ ಚೀಲಗಳನ್ನು ಅಹಾರ ಮತ್ತು ನಾಗರಿಕ ಸರಬರಾಜು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಅಮರಾಪುರ ಗ್ರಾಮದ ಗೋದಾಮಿನಲ್ಲಿ ತೆಲಂಗಾಣದಿಂದ ತಂದಿದ್ದ ಜೋಳ ಸಂಗ್ರಹಿಸಿಟ್ಟದ ಕುರಿತು ಮಾಹಿತಿ ಪಡೆದ ಅಧಿಕಾರಿಗಳು ಪರಿಶೀಲನೆ ಮಾಡಿ, ಗೋದಾಮಿಗೆ ಬೀಗ ಮುದ್ರೆ ಹಾಕಿದ್ದರು. ಸಂಗ್ರಹಿಸಿಟ್ಟಿದ್ದ ಮರೇಗೌಡ ಎನ್ನುವವರು ಬಳ್ಳಾರಿಯಿಂದ ಖರೀದಿ ಮಾಡಿಕೊಂಡು ಬಂದಿರುವುದಾಗಿ ಜೋಳಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ನೀಡಿದ್ದನು. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ಕೃಷಿ ಉತ್ಪನ್ನ ಮಾರುಕಟ್ಟೆಗೆ ಅಧಿಕಾರಿಗಳಿಗೆ ಪತ್ರ ಬರೆದು ಪರಿಶೀಲಿಸಿ ವರದಿ ನೀಡುವಂತೆ ಮನವಿ ಮಾಡಿದ್ದರು.
ಈ ಬಗ್ಗೆ ಪರಿಶೀಲನೆ ನಡೆಸಿದ ಎಪಿಎಂಸಿ ಅಧಿಕಾರಿಗಳು, ಜೋಳ ಅಕ್ರಮವಾಗಿ ಸಂಗ್ರಹಿಸಿರುವ ಬಗ್ಗೆ ಮೇಲ್ನೋಟಕ್ಕೆ ಕಂಡುಬರುತ್ತದೆ ಎನ್ನುವ ವರದಿ ನೀಡಿದ್ದರು. ಈ ಹಿನ್ನಲೆಯಲ್ಲಿ ಸೋಮವಾರ ಕಂದಾಯ, ಆಹಾರ ಮತ್ತು ನಾಗರಿಕ ಇಲಾಖೆಯ ಅಧಿಕಾರಿಗಳು ಗ್ರಾಮೀಣ ಪೊಲೀಸರ ಸಹಕಾರದೊಂದಿಗೆ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಜೋಳವನ್ನು ಪಂಚರ ಸಮಕ್ಷಮದಲ್ಲಿ ವಶಕ್ಕೆ ಪಡೆದು, ಸರಕಾರಿ ಗೋದಾಮಿಗೆ ಸಾಗಿಸಲಾಯಿತು. ಮರೇಗೌಡ ಎನ್ನುವವರ ವಿರುದ್ದ ದೂರು ದಾಖಲಾಗಿದೆ.
ಈ ಸಂದರ್ಭದಲ್ಲಿ ಉಪತಹಶೀಲ್ದಾರ್ ಅಂಬಾದಾಸ, ಆಹಾರ ಇಲಾಖೆಯ ಶಿರಸ್ತೇದಾರ ಆನಂದ್ ಮೋಹನ್, ಆಹಾರ ನಿರೀಕ್ಷಕ ಹನುಮೇಶ ನಾಯಕ, ಕಂದಾಯ ನಿರೀಕ್ಷಕ ಲಿಂಗರಾಜ, ಗ್ರಾಮ ಆಡಳಿತಾಧಿಕಾರಿ ಸುಜಾತ ಸೇರಿದಂತೆ ಅನೇಕರು ಇದ್ದರು.







