Raichur | ಮತದಾರರ ಪಟ್ಟಿ ಪರಿಷ್ಕರಣೆ ಶೇ.69 ಪೂರ್ಣ : 11.83 ಲಕ್ಷ ಅರ್ಜಿಗಳ ಡಿಜಿಟಲೀಕರಣ

ಸಾಂದರ್ಭಿಕ ಚಿತ್ರ | Photo credit : PTI
ರಾಯಚೂರು, ಜು.20: ಜಿಲ್ಲೆಯ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆ ವೇಗ ಪಡೆದುಕೊಂಡಿದ್ದು, ಜುಲೈ 20ರ ಸಂಜೆ 4 ಗಂಟೆಯ ವೇಳೆಗೆ ಜಿಲ್ಲೆಯ ಒಟ್ಟು 17,14,559 ಮತದಾರರಿಗೆ ಶೇ.100ರಷ್ಟು ಎಣಿಕೆ ನಮೂನೆ (Enumeration Form) ವಿತರಿಸಲಾಗಿದೆ. ಈ ಪೈಕಿ 11,83,173 ನಮೂನೆಗಳು, ಅಂದರೆ ಶೇ.69.01ರಷ್ಟು ನಮೂನೆಗಳು ಡಿಜಿಟಲೀಕರಣಗೊಂಡಿವೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
ಜಿಲ್ಲೆಯಲ್ಲಿ 1,853 ಮತಗಟ್ಟೆಗಳಿದ್ದು, ಜೂನ್ 30ರಿಂದ ಜುಲೈ 29ರವರೆಗೆ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್ಒ) ಮನೆ-ಮನೆಗೆ ಭೇಟಿ ನೀಡಿ ಎಣಿಕೆ ನಮೂನೆಗಳ ವಿತರಣೆ ಹಾಗೂ ಡಿಜಿಟಲೀಕರಣ ಕಾರ್ಯವನ್ನು ಕೈಗೊಂಡಿದ್ದಾರೆ. ಜಿಲ್ಲೆಯ ಒಟ್ಟು ಮತದಾರರ ಪೈಕಿ ಶೇ.92.03ರಷ್ಟು ಮತದಾರರನ್ನು ಈಗಾಗಲೇ ಮ್ಯಾಪ್ ಮಾಡಲಾಗಿದೆ.
ಪ್ರಕಟಣೆಯ ಪ್ರಕಾರ, ಆನ್ಲೈನ್ ಮೂಲಕ 4,994 ಎಣಿಕೆ ನಮೂನೆಗಳು ಸಲ್ಲಿಕೆಯಾಗಿದ್ದು, ಇದು ಒಟ್ಟು ಮತದಾರರಲ್ಲಿ ಶೇ.0.29ರಷ್ಟಾಗಿದೆ. ಇದೇ ವೇಳೆ 83,921 ಪ್ರಕರಣಗಳನ್ನು ASDDO ಎಂದು ಗುರುತಿಸಲಾಗಿದ್ದು, 45,425 ಮತದಾರರು ಶಾಶ್ವತವಾಗಿ ಸ್ಥಳಾಂತರಗೊಂಡಿರುವುದು, 25,403 ಮತದಾರರು ಮೃತಪಟ್ಟಿರುವುದು, 12,122 ಮಂದಿ ಈಗಾಗಲೇ ನೋಂದಾಯಿತರಾಗಿರುವುದು, 785 ಮಂದಿ ಗೈರು ಅಥವಾ ಪತ್ತೆಯಾಗದಿರುವುದು ಹಾಗೂ 186 ಪ್ರಕರಣಗಳು ಇತರೆ ವಿಭಾಗಕ್ಕೆ ಸೇರಿರುವುದಾಗಿ ಜಿಲ್ಲಾಧಿಕಾರಿ ಕಚೇರಿ ಮಾಹಿತಿ ನೀಡಿದೆ.
ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ನಿಗದಿತ ವೇಳಾಪಟ್ಟಿಯಂತೆ ಮುಂದುವರಿದಿದ್ದು, ಉಳಿದ ಎಣಿಕೆ ನಮೂನೆಗಳ ಡಿಜಿಟಲೀಕರಣ ಕಾರ್ಯವನ್ನು ಶೀಘ್ರ ಪೂರ್ಣಗೊಳಿಸಲು ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.






