ರಾಯಚೂರು | ಕಲ್ಲೂರು ಹೋಬಳಿಯಲ್ಲಿ 79 ಟನ್ ಯೂರಿಯಾ ಗೊಬ್ಬರ ಅವ್ಯವಹಾರ ಆರೋಪ : ತನಿಖೆಗೆ ಸಾಜೀದ್ ಹುಸೇನ್ ಒತ್ತಾಯ

ರಾಯಚೂರು: ಜಿಲ್ಲೆಯ ಸಿರವಾರ ತಾಲ್ಲೂಕಿನ ಕಲ್ಲೂರು ಹೋಬಳಿಯ ಪ್ರಾಥಮಿಕ ಪತ್ತಿನ ಸಹಾಯಕ ಸಂಘದಲ್ಲಿ ಯೂರಿಯಾ ಗೊಬ್ಬರ 79 ಟನ್ ಅವ್ಯವಹಾರ ನಡೆದಿದ್ದು, ಇದರಲ್ಲಿ ಅಧಿಕಾರಿಗಳು ಶಾಮೀಲಾಗಿದ್ದಾರೆ. ಇದರ ಬಗ್ಗೆ ಕೂಲಂಕುಶವಾಗಿ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಅಖಿಲ ಕರ್ನಾಟಕ ಭ್ರಷ್ಟಾಚಾರ ನಿರ್ಮೂಲನ ರೈತ ಸಂಘ (ರಿ) ಹಾಗೂ ಹಸಿರು ಸೇನೆಯ ಜಿಲ್ಲಾ ಅಧ್ಯಕ್ಷ ಸಾಜೀದ್ ಹುಸೇನ್ ಒತ್ತಾಯಿಸಿದರು.
ಅವರು ರಾಯಚೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಯಚೂರು ಎಪಿಎಂಸಿಯಿಂದ ಜೂ.19 ರಂದು 18 ಟನ್, ಜೂ. 24 ರಂದು 36 ಟನ್, ಜು.4 ರಂದು 25 ಟನ್ ಸೇರಿ ಒಟ್ಟು 79 ಟನ್ ಯೂರಿಯಾ ರಸಗೊಬ್ಬರ ಸರಬರಾಜು ಮಾಡಲಾಗಿದೆ. ಆದರೆ ಯಾವ ಸದಸ್ಯರಿಗೆ ಮಾಹಿತಿ ನೀಡದೆ ಅಧಿಕಾರಿಗಳು ಸ್ವ ಇಚ್ಛೆಯಿಂದ ಕಳ್ಳಸಂತೆಗೆ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿದರು.
ಸಿರವಾರ ತಾಲ್ಲೂಕು ಸೇರಿ ಇನ್ನೂ ಉಳಿದ ತಾಲ್ಲೂಕಿನಲ್ಲಿ ಕೂಡಾ ರಸ ಗೊಬ್ಬರ ಕಳ್ಳಸಾಗಣೆ ಆಗುತ್ತಿದೆ. ಅಧಿಕಾರಿಗಳು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ಇತ್ತೀಚಿಗೆ ಗೊಬ್ಬರ ವಿತರಣೆ ಸಂದರ್ಭದಲ್ಲಿ ಅಧಿಕಾರಿಗಳು ಕೇವಲ ಕ್ರಿಮಿನಾಶಕ ಲಿಕ್ವಿಡ್ ಖರೀದಿಸಿದರೆ ಮಾತ್ರ ಗೊಬ್ಬರ ನೀಡಲಾಗುತ್ತದೆ ಎಂದು ರೈತರ ಮೇಲೆ ಒತ್ತಡ ಹಾಕುತ್ತಿದ್ದಾರೆ. ಇದು ಅಕ್ರಮ ಹಾಗೂ ರೈತರ ಮೇಲೆ ದಬ್ಬಾಳಿಕೆ ಎಂದು ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಶಿವಶರಣ, ಜನಾರ್ದನ ಗೌಡ, ಸಂಗಮೇಶ ನಾಯಕ, ರಾಮಕೃಷ್ಣ, ಅರಣುಕುಮಾರ ಉಪಸ್ಥಿತರಿದ್ದರು.







