ರಾಯಚೂರು | ಜಿಲ್ಲೆಯಲ್ಲಿ 9 ಮಿ.ಮೀ. ಮಳೆ; ಕೃಷ್ಣಾ ನದಿಗೆ 48 ಸಾವಿರ ಕ್ಯೂಸೆಕ್ ನೀರು ಬಿಡುಗಡೆ

ರಾಯಚೂರು: ನಗರ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಭಾನುವಾರ ಹಾಗೂ ಸೋಮವಾರ ಉತ್ತಮ ಮಳೆಯಾಗಿದೆ.
ರಾಯಚೂರು ನಗರದ ಮಂತ್ರಾಲಯ ರಸ್ತೆ, ಐಬಿ ರಸ್ತೆ, ಸಿಟಿ ಟಾಕೀಸ್ ರಸ್ತೆ, ಖಾಸಭಾವಿ, ಗಂಜ್ ರಸ್ತೆ, ಲೋಹರವಾಡಿ ಸೇರಿದಂತೆ ವಿವಿಧೆಡೆ ಮಳೆ ನೀರು ರಸ್ತೆಯ ಮೇಲೆಲ್ಲ ನಿಂತು ರಸ್ತೆಗಳು ಕೆರೆಯಂತಾಗಿದ್ದವು. ವಾಹನ ಸವಾರರು ಪರದಾಡುವಂತಾಯಿತು. ರಸ್ತೆಯ ಎರೆಡು ಬದಿಯಲ್ಲಿ ಚರಂಡಿ ನಿರ್ಮಾಣ ಮಾಡಿ ಮಳೆ ನೀರು ಹೋಗಲು ಅನುಕೂಲ ಮಾಡದ ಕಾರಣ ನಗರದಲ್ಲಿ ಅಲ್ಪ ಮಳೆ ಬಂದರೂ ರಸ್ತೆಯ ಮೇಲೆ ನೀರು ನಿಲ್ಲುವುದು ಸಾಮಾನ್ಯವಾಗಿದೆ.
ಜಿಲ್ಲೆಯಲ್ಲಿ 9 ಮಿ.ಮೀ. ಮಳೆ:
ಭಾನುವಾರ ಬೆಳಗ್ಗೆಯಿಂದ ಸೋಮವಾರ ತನಕ ಜಿಲ್ಲೆಯಾದ್ಯಂತ 9 ಮಿಮೀ ಮಳೆಯಾಗಿದೆ. ಇದರಲ್ಲಿ ಮಾನ್ವಿ ತಾಲೂಕಿನಲ್ಲಿ ಅತೀ ಹೆಚ್ಚು 22 ಮಿಮೀ ಮಳೆಯಾಗಿದ್ದು, ಜಿಲ್ಲಾ ಕೇಂದ್ರವಾದ ರಾಯಚೂರು ನಗರ ಮತ್ತು ತಾಲೂಕಿನಲ್ಲಿ 20 ಮಿಮೀ, ಸಿರವಾರದಲ್ಲಿ 10 ಮಿಮೀ ಮಳೆ ಸುರಿದಿದೆ. ದೇವದುರ್ಗದಲ್ಲಿ 8 ಮಿಮೀ, ಸಿಂಧನೂರಿನಲ್ಲಿ 4 ಮಿಮೀ, ಮಸ್ಕಿ ಹಾಗೂ ಲಿಂಗಸುಗೂರಿನಲ್ಲಿ ತಲಾ 2 ಮಿ.ಮೀ. ಮಳೆ ಸುರಿದಿದೆ.
ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಮಳೆಯಾಗುತ್ತಿದ್ದು ವಾಡಿಕೆ ಪ್ರಕಾರ 24 ಮಿ.ಮೀ. ಮಳೆಯಲ್ಲಿ 32 ಮಿ.ಮೀ. ಮಳೆಯಾಗಿದ್ದು, ಶೇ.31 ರಷ್ಟು ಮಳೆ ಸುರಿದಿದೆ. ಕಳೆದ ವಾರವೇ ಮಳೆಯ ಕೊರತೆಯನ್ನು ಅನುಭವಿಸಿದ್ದ ಜಿಲ್ಲೆಯ ರೈತರು ಎರಡ್ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯು ರೈತರಲ್ಲಿ ಸಂತಸ ಮರುಕಳಿಸುವಂತೆ ಮಾಡಿದೆ







