ರಾಯಚೂರು | ಆ.7ರಂದು ನಡೆಯುವ ಸಚಿವ ಸಂಪುಟದಲ್ಲಿ ಒಳಮೀಸಲಾತಿ ಜಾರಿಗೆ ತೀರ್ಮಾನ ಕೈಗೊಳ್ಳಲಿ: ಎಸ್.ಮಾರೆಪ್ಪ

ರಾಯಚೂರು: ಆ.7ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ನ್ಯಾ.ನಾಗಮೋಹನದಾಸ್ ಆಯೋಗವು ಸಲ್ಲಿಸಿರುವ ವರದಿಯ ಕುರಿತು ಚರ್ಚಿಸಿ ಜಾರಿಗೊಳಿಸಲು ತೀರ್ಮಾನ ಕೈಗೊಳ್ಳಬೇಕು ಎಂದು ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಹೋರಾಟ ಸಮಿತಿಯ ರಾಜ್ಯ ಪ್ರಧಾನ ಸಂಚಾಲಕ ಎಸ್.ಮಾರೆಪ್ಪ ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಕರೆದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನೇಕ ವರ್ಷಗಳ ಬೇಡಿಕೆಯಾದ ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿಯನ್ನು ಜಾರಿಗೊಳಿಸಲು ಸರ್ಕಾರ ಮುಂದಾಗಬೇಕು. ನ್ಯಾ.ನಾಗಮೋಹನ್ದಾಸ್ ಆಯೋಗವು ಆ.4ರಂದು ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದು, ಈ ಆಯೋಗದ ಅಧ್ಯಕ್ಷರು ಮತ್ತು ಸಿಬ್ಬಂದಿಗೆ ಸಮುದಾಯದ ಪರವಾಗಿ ಅಭಿನಂದನೆ ಸಲ್ಲಿಸುತ್ತಿರುವುದಾಗಿ ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆ.7ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ವರದಿಯನ್ನು ಚರ್ಚೆಗೆ ಇಡಲಾಗುವುದು ಎಂದು ತಿಳಿಸಿರುವುದನ್ನು ಉಲ್ಲೇಖಿಸಿ, ಯಾವುದೇ ಒತ್ತಡಗಳಿಗೆ ಮಣಿಯದೇ ಈ ಕುರಿತು ತೀರ್ಮಾನ ಕೈಗೊಳ್ಳುವಂತೆ ಮನವಿ ಮಾಡಿದರು.
ಆ.7ರಂದು ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದ ಅವರು, ಈ ಹೋರಾಟ ಯಶಸ್ವಿಯಾಗಲು ರಾಯಚೂರಿನ ಅಸ್ಪೃಶ್ಯ ಸಮುದಾಯಗಳ ಹಾಗೂ ಹೋರಾಟಗಾರರಿಂದ ಬೆಂಬಲ ಕೋರಿ ಪುನರುಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಪ್ರಮುಖರಾದ ಹೇಮರಾಜ್ ಅಸ್ಕಹಾಳ್, ಆಂಜನೇಯ್ಯ ಉಟ್ಕೂರು, ನರಸಿಂಹಲು ಮರ್ಚಟಾಳ್, ಶ್ರೀನಿವಾಸ ಕೊಪ್ಪರ, ಅಬ್ರಹಂ ಕಮಲಾಪೂರ, ಆಂಜನೇಯ್ಯ ಕುರುಬದೊಡ್ಡಿ, ತಾಯಪ್ಪ ಗದಾರ, ಕರೆಷ್ಣ, ಲಕ್ಷ್ಮಣ ಕಲ್ಲೂರು ಸೇರಿದಂತೆ ಹಲವರು ಉಪಸ್ಥಿತರಿದ್ದರು







