ರಾಯಚೂರು | ಜಿಲ್ಲಾಡಳಿತದಿಂದ ಕೃಷಿ ವಿವಿ ಆವರಣದಲ್ಲಿ ಬೃಹತ್ ಉದ್ಯೋಗ ಮೇಳ ಯಶಸ್ವಿ
ನಮ್ಮ ಸರ್ಕಾರದಲ್ಲಿ ಯುವಕರಿಗೆ ಹೆಚ್ಚಿನ ಆದ್ಯತೆ ; ಸಚಿವ ಡಾ.ಶರಣಪ್ರಕಾಶ್ ಆರ್.ಪಾಟೀಲ್

ರಾಯಚೂರು : ನಮ್ಮ ಸರ್ಕಾರದಲ್ಲಿ ಯುವಕರಿಗೆ ಹೆಚ್ಚಿನ ಆದ್ಯತೆ ನೀಡಿ, ಅವರಿಗೆ ಪ್ರೋತ್ಸಾಹ ನೀಡುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರು ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಶರಣಪ್ರಕಾಶ್ ಆರ್.ಪಾಟೀಲ್ ಅವರು ಹೇಳಿದರು.
ಮಾ.1ರ ಶನಿವಾರ ದಂದು ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರೇಕ್ಷಾಗೃಹದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ ಬೆಂಗಳೂರು, ಸಂಜೀವಿನಿ-ಕೆಎಸ್ಆರ್ಎಲ್ಪಿಎಸ್ ಮತ್ತು ಜಿಲ್ಲಾ ಕೌಶನ್ಯ ಮಿಷನ್ ರಾಯಚೂರು ಇವರ ಸಂಯುಕ್ತಾಶ್ರಯದಲ್ಲಿ ಡಿ.ಡಿ.ಯು-ಜಿ.ಕೆ.ವೈ ಯೋಜನೆ ಮತ್ತು ಸಂಕಲ್ಪ ಯೋಜನೆಯಡಿ ಉದ್ಯೋಗ ಮೇಳ-2025ರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ದೇಶದಲ್ಲಿ ದೊಡ್ಡ ಸಮಸ್ಯೆ ಎಂದರೆ ನಿರುದ್ಯೋಗದ ಸಮಸ್ಯೆಯಾಗಿದ್ದು, ರಾಜ್ಯ ಸರ್ಕಾರವು ಯುವ ಜನಾಂಗ ಪರ ನಿಂತಿದೆ. ಅವರಿಗೆ ಯುವನಿಧಿ ಯೋಜನೆಯಡಿ 2 ಲಕ್ಷ ನಿರುದ್ಯೋಗಿ ಪದವಿಯವರಿಗೆ 3000 ಸಾವಿರ ರೂ. ಹಾಗೂ ಡಿಪ್ಲೊಮಾ ಅಭ್ಯರ್ಥಿಗಳಿಗೆ 1500 ರೂಪಾಯಿಗಳನ್ನು ನೀಡುವ ಮೂಲಕ ದೇಶದಲ್ಲಿ ಮಾದರಿಯಾಗಿದ್ದೇವೆ. ಜೊತೆಗೆ 25 ಸಾವಿರ ಜನರಿಗೆ ವಿಶೇಷ ಕೌಶಲ್ಯ ತರಬೇತಿ ನೀಡಲಾಗಿದೆ. ರಾಜ್ಯಕ್ಕೆ ದೇಶ ವಿದೇಶಗಳಿಂದ ವಿವಿಧ ಕಂಪನಿಗಳು ಹರಿದು ಬರುತ್ತವೆ ಎಂದು ಹೇಳಿದರು.
ಬೆಂಗಳೂರು ಸಿಟಿಯಲ್ಲಿ ಐಟಿವಿಟಿ ಬೆಳೆಯುತ್ತಿದ್ದು, ಅನೇಕ ಉದ್ಯೋಗಗಳು ಸಿಗುತ್ತಿವೆ. ಹೊರ ದೇಶಗಳಿಂದ ನಮ್ಮನ್ನು ಸಂಪರ್ಕ ಮಾಡಿ ರಾಜ್ಯಕ್ಕೆ ಬರುತ್ತಿದ್ದಾರೆ. ಸ್ಥಳೀಯ ಕೈಗಾರಿಕೆಗಳಲ್ಲಿ ಸರೋಜಿನಿ ಮಹಿಷಿ ವರದಿ ಪ್ರಕಾರ ಕಂಪನಿಯವರು ಕಡ್ಡಾಯವಾಗಿ ಸ್ಥಳೀಯರಿಗೆ ಉದ್ಯೋಗಾವಕಾಶ ನೀಡಬೇಕು. ಅದು ಅವರ ಕರ್ತವ್ಯ ಈ ಬಗ್ಗೆ ಜಿಲ್ಲಾಧಿಕಾರಿಗಳು ಸಂಬಂಧಪಟ್ಟವರನ್ನು ಕರೆಸಿ ಸೂಚನೆ ನೀಡಬೇಕೆಂದು ಹೇಳಿದರು.
ಬೆಂಗಳೂರಿನಲ್ಲಿ 47 ಸಾವಿರ ಜನರನ್ನು ಒಳಗೊಂಡ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದ್ದು, ಅದರಲ್ಲಿ ಸುಮಾರು 25 ಸಾವಿರ ಜನರಿಗೆ ಉದ್ಯೋಗವನ್ನು ನೀಡಲಾಗಿದೆ. ಅದೇ ರೀತಿ ಮಾ.28ಕ್ಕೆ ಕಲ್ಯಾಣ ಕನಾಟಕ ಭಾಗದ ಕಲಬುರಗಿ ಜಿಲ್ಲೆಯಲ್ಲಿ ಬೃಹತ್ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದ್ದು, ಅರ್ಹ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕರೆ ನೀಡಿದರು.
ಈ ವೇಳೆ ಕರ್ನಾಟಕ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರು ಆಗಿರುವ ರಾಯಚೂರು ಗ್ರಾಮಾಂತರ ಕ್ಷೇತ್ರದ ಶಾಸಕರಾದ ಬಸನಗೌಡ ದದ್ದಲ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಉದ್ಯೋಗಕ್ಕಾಗಿ ಅನೇಕ ಅಭ್ಯರ್ಥಿಗಳು ಮುಂದೆ ಬರುತ್ತಾರೆ. ಅಂತವರಿಗೆ ಈ ವೇದಿಕೆ ಉತ್ತಮ ದಾರಿದೀಪವಾಗಿದೆ. ವಿವಿಧ ಕಂಪನಿಗಳು ಜಿಲ್ಲಾಡಳಿತದೊಂದಿಗೆ ಮುಂದೆ ಬಂದಿದ್ದು, ಅಭ್ಯರ್ಥಿಗಳು ಈ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಬೇಕು. ಅಲ್ಲದೆ ಜಿಲ್ಲೆಯಲ್ಲಿ ಅನೇಕ ಕಂಪನಿಗಳಿದ್ದು, ಅವುಗಳಲ್ಲಿ ಸ್ಥಳೀಯರಿಗೆ ಉದ್ಯೋಗದಲ್ಲಿ ಕನಿಷ್ಠ ಶೇ.50 ರಷ್ಟು ಆದ್ಯತೆ ನೀಡಬೇಕು. ಉದ್ಯೋಗ ನೀಡಿದ ಕಂಪನಿಯಲ್ಲಿ ಅಭ್ಯರ್ಥಿಗಳು ಪ್ರಾಮಾಣಿಕವಾಗಿ ಸೇವೆ ಮಾಡಿನ ನಿಮ್ಮ ತಂದೆ-ತಾಯಿಯರ ಆಸೆಗಳನ್ನು ಈಡೇರಿಸಬೇಕೆಂದು ಹೇಳಿದರು.
ನಿರುದ್ಯೋಗಿಗಳಲ್ಲಿ ಆಶಾಭಾವನೆ ಮೂಡಿಸಿದ ಉದ್ಯೋಗ ಮೇಳ :
ಜಿಲ್ಲೆಯ ನಿರುದ್ಯೋಗಿಗಳಿಗೆ ಉದ್ಯೋಗ ದೊರಕಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತದಿಂದ ಹಮ್ಮಿಕೊಳ್ಳಲಾಗಿದ್ದ ಉದ್ಯೋಗ ಮೇಳವು ನಿರುದ್ಯೋಗಿಗಳಲ್ಲಿ ಆಶಾಭಾವನೆ ಮೂಡಿಸಿದೆ. ಜಿಲ್ಲೆಯಲ್ಲಿ ನಿರುದ್ಯೋಗ ನಿವಾರಣೆಗೆ ಜಿಲ್ಲಾಡಳಿತ ಈ ಮೇಳವನ್ನು ಆಯೋಜಿಸಿದೆ. ಸದ್ಯದ ಪರಿಸ್ಥಿತಿಯಲ್ಲಿ ಉದ್ಯೋಗವು ತೀರಾ ಅವಶ್ಯಕವಾಗಿದೆ. ಕೆಲವು ಕೌಶಲ್ಯಗಳನ್ನು ವೃದ್ಧಿಸಿಕೊಳ್ಳಲು ಉದ್ಯೋಗ ಮೇಳದಲ್ಲಿ ಸೌಲಭ್ಯಗಳನ್ನು ಕಲ್ಪಿಸಿಕೊಳ್ಳಲಾಗಿದ್ದು, ನಿರುದ್ಯೋಗಿ ಯುವ ಮಿತ್ರರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಂಡಿದ್ದಾರೆ ಎಂದು ಉದ್ಯೋಗ ಮೇಳದಲ್ಲಿ ಭಾಗಿಯಾದ ಉದ್ಯೋಗ ಆಕಾಂಕ್ಷಿಗಳು ಹೇಳಿದರು.
693 ಮಂದಿಗೆ ಸ್ಥಳದಲ್ಲೇ ಉದ್ಯೋಗ ಪತ್ರ :
ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕ್ರೀಡಾಂಗಣದ ಆವರಣದಲ್ಲಿ ಶನಿವಾರ ನಡೆದ ಬೃಹತ್ ಉದ್ಯೋಗ ಮೇಳದಲ್ಲಿ 65ಕ್ಕೂ ಹೆಚ್ಚು ವಿವಿಧ ಕಂಪನಿಗಳು ಪಾಲ್ಗೊಂಡಿದ್ದು, 6,196 ಅಭ್ಯರ್ಥಿಗಳು ಆನ್ ಲೈನ್ ನೋಂದಣಿಯಾಗಿದ್ದು, 693 ಮಂದಿಗೆ ಸ್ಥಳದಲ್ಲೇ ಉದ್ಯೋಗ ಪತ್ರ ವಿತರಿಸಲಾಯಿತು. 820 ಅಭ್ಯರ್ಥಿಗಳ ಕಿರು ಪಟ್ಟಿಯನ್ನು ಮಾಡಲಾಗಿದೆ. 1043 ಯುವನಿಧಿ ಫಲಾನುಭವಿಗಳು ಭಾಗವಹಿಸಿದರು.
ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಕೈಗಾರಿಕಾ ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರು ಆಗಿರುವ ಸಿಂಧನೂರು ಕ್ಷೇತ್ರದ ಶಾಸಕರಾದ ಹಂಪನಗೌಡ ಬಾದರ್ಲಿ, ವಿಧಾನ ಪರಿಷತ್ ಶಾಸಕರಾದ ಎ.ವಸಂತಕುಮಾರ್, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಗೌಡ, ಜಿಲ್ಲಾಧಿಕಾರಿಗಳಾದ ನಿತೀಶ್ ಕೆ., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ತುಕಾರಾಂ ಪಾಂಡ್ವೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಪುಟ್ಟಮಾದಯ್ಯ ಎಂ., ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿಯಾದ ಶಶಿಕಾಂತ್ ಶಿವಪೂರೆ, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಡಾ.ಟಿ.ರೋಣಿ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಜಿ.ಯು.ಹುಡೇದ್, ಜಿಲ್ಲಾ ಕೈಗಾರಿಕಾ ಅಧಿಕಾರಿ ಬಸವರಾಜ ಯರಕಂಚಿ, ಜಿಲ್ಲಾ ಉದ್ಯೋಗಾಧಿಕಾರಿ ನವೀನ್ ಕುಮಾರ್, ಸೇರಿದಂತೆ ಇತರರು ಇದ್ದರು.







