Raichur | ಎಸ್‌ಸಿ, ಎಸ್‌ಟಿ ಸಮುದಾಯಗಳು ಒಂದಾದರೆ ಸದೃಢ ದೇಶ ನಿರ್ಮಾಣ ಸಾಧ್ಯ: ಎಡಿಜಿಪಿ ಪಿ.ಹರಿಶೇಖರನ್
ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಇಲಾಖೆಯಿಂದ ಸಾಮಾಜಿಕ ನ್ಯಾಯ ಸಭೆ

ರಾಯಚೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ನಡುವೆ ದ್ವೇಷ ಸೃಷ್ಟಿಯಾಗುತ್ತಿರುವುದು ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗುತ್ತಿದೆ. ಈ ಎರಡೂ ಸಮುದಾಯಗಳು ಒಂದಾದರೆ ಮಾತ್ರ ಸದೃಢ ದೇಶ ನಿರ್ಮಿಸಲು ಸಾಧ್ಯ ಎಂದು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಪಿ. ಹರಿಶೇಖರನ್ ಅಭಿಪ್ರಾಯಪಟ್ಟರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಜಗಜೀವನರಾಮ್ ಭವನದಲ್ಲಿ ಮಂಗಳವಾರ ಜಿಲ್ಲಾಡಳಿತ, ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಪೊಲೀಸ್ ಠಾಣೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಸಾಮಾಜಿಕ ನ್ಯಾಯ ಸಭೆಯಲ್ಲಿ ಅವರು ಮಾತನಾಡಿದರು.
ಪ್ರತಿಯೊಬ್ಬರೂ ಕಾಯ್ದೆಗಳ ಬಗ್ಗೆ ಅರಿವು ಹೊಂದಿದಾಗ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಕಾಯ್ದೆಗಳ ಅರಿವಿಲ್ಲದಿದ್ದರೆ ಅಧಿಕಾರಿಗಳು ಮತ್ತು ಜನರು ಸಮಸ್ಯೆಗಳಿಗೆ ಸ್ಪಂದಿಸುವುದು ಕಷ್ಟವಾಗುತ್ತದೆ. ಎಸ್‌ಸಿ, ಎಸ್‌ಟಿ ಕಾಯ್ದೆಯಡಿ ನಡೆಯುವ ಘಟನೆಗಳಿಗೆ ಸಂಬಂಧಿಸಿದಂತೆ ಪ್ರಕರಣಗಳನ್ನು ದಾಖಲಿಸಲಾಗುತ್ತದೆ. ಆದರೆ, ಆ ಪ್ರಕರಣಗಳಲ್ಲಿ ಸಾಕಷ್ಟು ಲೋಪದೋಷಗಳು ಕಂಡುಬರುತ್ತವೆ. ಇದರಿಂದ ಅನ್ಯಾಯಕ್ಕೊಳಗಾದವರಿಗೆ ನ್ಯಾಯ ದೊರಕದಂತಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಕಾಯ್ದೆಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದು ಕರೆ ನೀಡಿದರು.
ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಪ್ರತಿಯೊಬ್ಬರಿಗೂ ಹಕ್ಕುಗಳನ್ನು ಕಲ್ಪಿಸಿದ್ದಾರೆ. ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ನಾಯಕರು ಸಮುದಾಯದ ಸಮಸ್ಯೆಗಳಿಗೆ ಸ್ಪಂದಿಸಬೇಕು. ಇಂತಹ ಸಭೆಗಳಲ್ಲಿ ರಾಜಕೀಯ ಭಾಷಣ ಮಾಡುವುದು ಸರಿಯಲ್ಲ. ರಾಜಕೀಯವನ್ನು ಹೊರಗಿಡಬೇಕು. ಸಮುದಾಯಕ್ಕೆ ಅನ್ಯಾಯವಾದಾಗ ಜನಪ್ರತಿನಿಧಿಗಳನ್ನು ಪ್ರಶ್ನಿಸಬೇಕು. ಮತದಾನ ಮಾಡುವಾಗಲೂ ಎಚ್ಚರಿಕೆ ವಹಿಸಬೇಕು. ಯಾರು ಯಾವ ಪಕ್ಷದಿಂದ ಯಾವ ಪಕ್ಷಕ್ಕೆ ಹೋಗಿದ್ದಾರೆ ಎಂಬುದೂ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳ ಬಗ್ಗೆ ನನಗೂ ಮಾಹಿತಿ ಇದೆ ಎಂದು ಹೇಳಿದರು.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಮಾಹಿತಿ ತಲುಪಿಸಲು ಪ್ರತ್ಯೇಕ ಗುಂಪುಗಳನ್ನು ರಚಿಸಲಾಗುತ್ತಿದೆ. ಈ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮಹತ್ವದ ಯೋಜನೆ ರೂಪಿಸಲಾಗಿದೆ. ಅಲ್ಲದೆ, ಮುಂದಿನ ದಿನಗಳಲ್ಲಿ ಎಸ್‌ಸಿ, ಎಸ್‌ಟಿ ದೌರ್ಜನ್ಯ ನಿಯಂತ್ರಣ ಸಮಿತಿಯ ಹೆಸರನ್ನು ‘ಸಾಮಾಜಿಕ ನ್ಯಾಯ ಸಮಿತಿ’ ಎಂದು ಬದಲಾಯಿಸಲು ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಪೂವಿತಾ ಎಸ್. ಹಾಗೂ ಮಹಾನಗರ ಪಾಲಿಕೆ ಆಯುಕ್ತ ಜುಬೀನ್ ಮೊಹಪಾತ್ರ ಮಾತನಾಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷುಗಿರಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಿ. ಹರೀಶ, ಡಿಸಿಆರ್‌ಇ ಡಿವೈಎಸ್‌ಪಿ ರಾಜಕುಮಾರ ವಾಜಂತ್ರಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಕೃಷ್ಣ ಶಾವಂತಗೇರಾ, ಬಳ್ಳಾರಿ ಎಸ್‌ಪಿ ನವೀನಕುಮಾರ, ಡಿವೈಎಸ್‌ಪಿ ಶಾಂತವೀರ, ಜಿ. ಚಂದ್ರಶೇಖರ, ಸಿಪಿಐ ಉಮೇಶ ಕಾಂಬ್ಳೆ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ವಿವಿಧ ಸಮಸ್ಯೆಗಳ ಕುರಿತು ಸಭೆಯಲ್ಲಿ ಚರ್ಚೆ :
ಜಿಲ್ಲೆಯಲ್ಲಿ ದಲಿತ ಮಹಿಳೆಯರ ಮೇಲೆ ಅತ್ಯಾಚಾರ ಹಾಗೂ ಕೊಲೆ ಘಟನೆಗಳು ನಡೆದಿದ್ದರೂ ಯಾರ ವಿರುದ್ಧವೂ ಕ್ರಮ ಕೈಗೊಂಡಿಲ್ಲ. ಅಲ್ಲದೆ, ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಯನ್ನೂ ವರ್ಗಾವಣೆ ಮಾಡಿಲ್ಲ ಎಂದು ಸಭೆಯಲ್ಲಿ ಅಸಮಾಧಾನ ವ್ಯಕ್ತವಾಯಿತು. ಇಬ್ಬರು ವ್ಯಕ್ತಿಗಳ ನಡುವಿನ ವೈಯಕ್ತಿಕ ವಿಚಾರಗಳಿಗೆ ಸಂಬಂಧಿಸಿದ ಕೊಲೆ ಪ್ರಕರಣಗಳನ್ನು ಇಡೀ ಸಮುದಾಯಕ್ಕೆ ಸಂಬಂಧಿಸಿದಂತೆ ಬಿಂಬಿಸುವುದು ಸರಿಯಲ್ಲ ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದರು.
ಜಿಲ್ಲೆಯಾದ್ಯಂತ ಗಾಂಜಾ ಮಾರಾಟ ನಡೆಯುತ್ತಿದ್ದು, ಕರ್ತವ್ಯ ನಿರ್ವಹಿಸುತ್ತಿರುವ ಕೆಲವು ಪೊಲೀಸ್ ಸಿಬ್ಬಂದಿ ಹಾಗೂ ಅಧಿಕಾರಿಗಳು ಗಾಂಜಾ ಮಾರಾಟಗಾರರ ಸಂಪರ್ಕದಲ್ಲಿದ್ದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಲಾಯಿತು. ಹಲವು ವರ್ಷಗಳಿಂದ ಜಿಲ್ಲೆಯಲ್ಲೇ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳನ್ನು ಕೂಡಲೇ ವರ್ಗಾವಣೆ ಮಾಡಬೇಕು ಎಂಬ ಒತ್ತಾಯವೂ ಕೇಳಿಬಂತು.
ಜಿಲ್ಲೆಯ ಹಲವು ಜ್ವಲಂತ ಸಮಸ್ಯೆಗಳ ಕುರಿತು ಚರ್ಚೆ ನಡೆಯಿತು. ಒಂದು ಹಂತದಲ್ಲಿ ಸಭೆಯಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು. ಇದನ್ನು ಗಮನಿಸಿದ ಎಡಿಜಿಪಿ ಹರಿಶೇಖರನ್ ಅಸಮಾಧಾನ ವ್ಯಕ್ತಪಡಿಸಿದ ಪ್ರಸಂಗವೂ ನಡೆಯಿತು.






