Raichur | ಗೃಹಲಕ್ಷ್ಮಿ ಹಣದಲ್ಲಿ ಫ್ರಿಡ್ಜ್ ಖರೀದಿಸಿದ ಉಪ್ಪಲದೊಡ್ಡಿ ಗ್ರಾಮದ ಮಹಿಳೆ

ಸಿಂಧನೂರು: ರಾಜ್ಯದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳ ಪೈಕಿ ಗೃಹಲಕ್ಷ್ಮಿ ಯೋಜನೆಯು ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ವರದಾನವಾಗಿದೆ.
ಸಿಂಧನೂರು ತಾಲೂಕಿನ ಉಪ್ಪಲದೊಡ್ಡಿ ಗ್ರಾಮದ ನಿವಾಸಿ ಹನುಮಮ್ಮ ಅವರು, ತಮಗೆ ಪ್ರತಿ ತಿಂಗಳು ಬರುತ್ತಿದ್ದ 2 ಸಾವಿರ ಗೃಹಲಕ್ಷ್ಮಿ ಹಣ ಉಳಿತಾಯ ಮಾಡಿ ಶುಕ್ರವಾರ ತಮ್ಮ ಮನೆಗೆ ಒಂದು ಹೊಸ ಫ್ರಿಡ್ಜ್ ಖರೀದಿಸಿದ್ದಾರೆ.
ಬೆಲೆ ಏರಿಕೆಯ ಈ ಕಾಲದಲ್ಲಿ ಪ್ರತಿ ತಿಂಗಳು ಸಿಗುವ 2 ಸಾವಿರ ಸಾಮಾನ್ಯ ಕುಟುಂಬಕ್ಕೆ ಹಾಲಿನ ಬಿಲ್, ತರಕಾರಿ ಅಥವಾ ಮಕ್ಕಳ ಸಣ್ಣಪುಟ್ಟ ಶಾಲಾ ಖರ್ಚುಗಳನ್ನು ನಿಭಾಯಿಸಲು ದೊಡ್ಡ ಶಕ್ತಿಯಾಗಿದೆ. ಯಾವುದೇ ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೆ, ನೇರವಾಗಿ ಫಲಾನುಭವಿಯ ಬ್ಯಾಂಕ್ ಖಾತೆಗೆ ಹಣ ತಲುಪುತ್ತಿರುವುದು ಸರ್ಕಾರದ ಯೋಜನೆಯ ಯಶಸ್ವಿಯಾಗಿದೆ.
ಮಹಿಳೆಯರ ಕೈಗೆ ಹಣ ಬಂದಾಗ ಮಾರುಕಟ್ಟೆಯಲ್ಲಿ ಖರ್ಚಾಗುತ್ತದೆ, ಇದರಿಂದ ಸ್ಥಳೀಯ ಆರ್ಥಿಕತೆಗೂ ಚೈತನ್ಯ ಸಿಗುತ್ತದೆ. ಟೀಕೆಗಿಂತ ಕೆಲಸ ಮುಖ್ಯ, ಗ್ಯಾರಂಟಿ ಯೋಜನೆಗಳು ಜಾರಿಯಾಗುವುದಿಲ್ಲ ಎಂದು ವಿರೋಧ ಪಕ್ಷದವರು ಭವಿಷ್ಯ ನುಡಿದಿದ್ದರು. ಆದರೆ ಇಂದು ರಾಜ್ಯದ ಕೋಟ್ಯಂತರ ಮಹಿಳೆಯರು ಇದರ ಲಾಭ ಪಡೆಯುತ್ತಿದ್ದಾರೆ. ಟೀಕೆ ಮಾಡುವ ಮೊದಲು ಜನರ ಮುಖದಲ್ಲಿರುವ ನೆಮ್ಮದಿಯನ್ನು ನೋಡಬೇಕು ಎಂದು ಗ್ರಾಮದ ಮುಖಂಡ ವೀರೇಶ ಎನ್.ಉಪ್ಪಲದೊಡ್ಡಿ ಅಭಿಪ್ರಾಯ ಪಟ್ಟರು





