ರಾಯಚೂರು| ಅಯ್ಯಪ್ಪ ಮಾಲಾಧಾರಿಗಳಿಗೆ ಅಬ್ದುಲ್ ಕರೀಂ ಸಾಬ್‌ರಿಂದ ಅನ್ನ ಸಂತರ್ಪಣೆ

ರಾಯಚೂರು: ಜಿಲ್ಲೆಯ ಸಿರವಾರ ತಾಲೂಕಿನ ಕವಿತಾಳ ಪಟ್ಟಣದ ನಿವಾಸಿ ಅಬ್ದುಲ್ ಕರೀಂ ಸಾಬ್ ತಮ್ಮ ಮನೆಯಲ್ಲಿ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳಿಗೆ ಅನ್ನ ಸಂತರ್ಪಣೆ ಮಾಡುವ ಮೂಲಕ ಭಾವೈಕ್ಯತೆ ಮೆರೆದಿದ್ದಾರೆ.
ಪೂಜಾ ಕಾರ್ಯಕ್ರಮ ಮುಗಿಸಿಕೊಂಡು ಮನೆಗೆ ಬಂದ ಅಯ್ಯಪ್ಪಸ್ವಾಮಿ ಮಾಲಾಧಾರಿಗಳಿಗೆ ಬಿ.ಎ.ಕರೀಂಸಾಬ್ ಸ್ವತಃ ಊಟ ಬಡಿಸಿದರು. ಅಯ್ಯಪ್ಪಸ್ವಾಮಿ ಮಾಲಾಧಾರಿಗಳಿಗೆ ಹೋಳಿಗೆ, ಚಪಾತಿ, ಪಲ್ಯ, ಹಸಿ ತರಕಾರಿ, ಚಿತ್ರಾನ್ನ, ಹಪ್ಪಳ, ಅನ್ನ ಸಾಂಬಾರು ಉಣಬಡಿಸಿದ್ದರು.
‘ಅಯ್ಯಪ್ಪ ಸ್ವಾಮಿ ಭಕ್ತರಾಗಲು ಯಾವುದೇ ಜಾತಿ, ಧರ್ಮದ ಭೇದವಿಲ್ಲ. ಕಳೆದ ನಾಲ್ಕು ವರ್ಷಗಳಿಂದ ಅಯ್ಯಪ್ಪಸ್ವಾಮಿ ಭಕ್ತರಿಗೆ ಮನೆಯಲ್ಲಿ ಭೋಜನ ವ್ಯವಸ್ಥೆ ಮಾಡುತ್ತಿದ್ದೇನೆ. ಧರ್ಮ, ಜಾತಿ ಎನ್ನದೆ ಮಾನವಕುಲಕ್ಕೆ ಒಳಿತನ್ನು ಬಯಸುವುದು ಶ್ರೇಷ್ಠ ಎಂಬುದು ನನ್ನ ನಂಬಿಕೆ. ಹಿಂದೂ-ಮುಸ್ಲಿಮರು ಭಾವೈಕ್ಯತೆ, ಪರಸ್ಪರ ಗೌರವ, ಸಾಮರಸ್ಯ ಮತ್ತು ಸಹೋದರತ್ವದಿಂದ ಬದುಕಬೇಕುʼ ಎಂದು ಕರೀಂಸಾಬ್ ಹೇಳಿದರು.
"ಅಯ್ಯಪ್ಪ ಭಕ್ತರಿಗೆ ಯಾವುದೇ ಜಾತಿ, ಧರ್ಮದ ಭೇದ, ಭಾವ ಇಲ್ಲ. ಹಿಂದೂ, ಮುಸ್ಲಿಂ, ಕ್ರೈಸ್ತ ಹೀಗೆ ಯಾವುದೇ ಧರ್ಮದವರ ಮನೆಯಲ್ಲಿ ಪೂಜೆ ಮಾಡಲು ಮತ್ತು ಪ್ರಸಾದ ಸ್ವೀಕರಿಸಲು ಅವಕಾಶವಿದೆ. ಭಕ್ತಿಯಿಂದ ಆಹ್ವಾನ ನೀಡಿದರೆ ನಾವು ತಿರಸ್ಕರಿಸುವುದಿಲ್ಲ" ಎಂದು ಗುರುಸ್ವಾಮಿ ಚನ್ನಯ್ಯ ಸ್ವಾಮಿ ತಿಳಿಸಿದರು.
ಈ ವೇಳೆ ಬಿ ಅಬ್ದುಲ್ ಕರೀಮ್ ಸಾಬ್ ಅವರ ಕುಟುಂಬಸ್ಥರಾದ ಎಂ ಎ ವಹಾಬ್, ಇರ್ಫಾನ್ ಕೆ, ಮುಹಮ್ಮದ್ ಕಲೀಮ್ ಮತ್ತಿತರರು ಉಪಸ್ಥಿತರಿದ್ದರು.





