Raichur | ಗುತ್ತಿಗೆ, ಹೊರಗುತ್ತಿಗೆ ಪದ್ಧತಿ ರದ್ದುಪಡಿಸಿ ಕಾರ್ಮಿಕರನ್ನು ಖಾಯಂಗೊಳಿಸಿ: ಮೈತ್ರಿ ಕೃಷ್ಣನ್

ರಾಯಚೂರು: ನಿರಂತರ ಸ್ವರೂಪದ ಕೆಲಸಗಳಲ್ಲಿ ಗುತ್ತಿಗೆ, ಹೊರಗುತ್ತಿಗೆ, ತಾತ್ಕಾಲಿಕ ಹಾಗೂ ದಿನಗೂಲಿ ಆಧಾರಿತ ಉದ್ಯೋಗ ಪದ್ಧತಿಗಳನ್ನು ರದ್ದುಗೊಳಿಸಿ, ಎಲ್ಲಾ ಕಾರ್ಮಿಕರನ್ನು ಖಾಯಂಗೊಳಿಸಬೇಕು. ರಾಜ್ಯಾದ್ಯಂತ ನೇರ ವೇತನ ಪಾವತಿ ವ್ಯವಸ್ಥೆ ಜಾರಿಗೊಳಿಸುವುದರ ಜತೆಗೆ ಕಾರ್ಮಿಕರಿಗೆ ಮಾಸಿಕ 42 ಸಾವಿರ ರೂ. ಬದುಕುವ ವೇತನ ನೀಡಬೇಕು ಎಂದು ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ಸ್ (ಎಐಸಿಸಿಟಿಯು) ರಾಜ್ಯ ಪ್ರಧಾನ ಕಾರ್ಯದರ್ಶಿ ಮೈತ್ರಿ ಕೃಷ್ಣನ್ ಒತ್ತಾಯಿಸಿದರು.
ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಷ್ಕೃತ ಕನಿಷ್ಠ ವೇತನವನ್ನು ತಕ್ಷಣ ಜಾರಿಗೊಳಿಸಬೇಕು. ಪ್ರತಿಯೊಬ್ಬ ಕಾರ್ಮಿಕರಿಗೂ ಪರಿಷ್ಕೃತ ಕನಿಷ್ಠ ವೇತನದೊಂದಿಗೆ ಬಾಕಿ ಮೊತ್ತವನ್ನೂ ಪಾವತಿಸಲು ಸರ್ಕಾರ ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿದರು.
ಪ್ರಸ್ತುತ ಖಾಯಂ ಉದ್ಯೋಗಗಳು ಬಹುತೇಕ ಮಾಯವಾಗಿದ್ದು, ಗುತ್ತಿಗೆ, ಹೊರಗುತ್ತಿಗೆ, ತಾತ್ಕಾಲಿಕ, ದಿನಗೂಲಿ ಹಾಗೂ ನಿಗದಿತ ಅವಧಿಯ ಉದ್ಯೋಗಗಳೇ ಹೆಚ್ಚಾಗಿವೆ. ಕಾರ್ಖಾನೆಗಳು, ಸರ್ಕಾರಿ ಕಚೇರಿಗಳು, ಆಸ್ಪತ್ರೆಗಳು, ಸಾರ್ವಜನಿಕ ವಲಯದ ಸಂಸ್ಥೆಗಳು ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಗ್ರೂಪ್ ಎ ಮತ್ತು ಬಿ ಹುದ್ದೆಗಳು ಮಾತ್ರ ಹೆಚ್ಚಾಗಿ ಖಾಯಂ ಸ್ವರೂಪದಲ್ಲಿವೆ. ಗ್ರೂಪ್ ಸಿ ಮತ್ತು ಡಿ ಹುದ್ದೆಗಳನ್ನು ಹೊರಗುತ್ತಿಗೆ ಮೂಲಕ ಭರ್ತಿ ಮಾಡಲಾಗುತ್ತಿದೆ. ಅನೇಕ ಸಂಸ್ಥೆಗಳಲ್ಲಿ ಖಾಯಂ ನೌಕರರಿಗಿಂತ ಗುತ್ತಿಗೆ ಮತ್ತು ತಾತ್ಕಾಲಿಕ ಕಾರ್ಮಿಕರ ಸಂಖ್ಯೆಯೇ ಹೆಚ್ಚಾಗಿದೆ ಎಂದು ಹೇಳಿದರು.
ಗುತ್ತಿಗೆ ಅಥವಾ ಹೊರಗುತ್ತಿಗೆ ನೌಕರರೆಂದು ಗುರುತಿಸುವ ಮೂಲಕ ಕಾರ್ಮಿಕರ ಮೂಲಭೂತ ಹಕ್ಕುಗಳನ್ನು ನಿರಾಕರಿಸಲಾಗುತ್ತಿದೆ. ಆದರೆ, ಅವರು ನಿರ್ವಹಿಸುವ ಕೆಲಸದಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಖಾಯಂ ನೌಕರರು ಮಾಡುವ ಕೆಲಸವನ್ನೇ ಇವರು ಮಾಡುತ್ತಿದ್ದು, ಸಂಸ್ಥೆಗಳ ನಿರಂತರ ಕಾರ್ಯನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ದಿನಕ್ಕೆ 12ರಿಂದ 14 ಗಂಟೆಗಳ ಕಾಲ ದುಡಿದರೂ ಅತ್ಯಲ್ಪ ವೇತನ ನೀಡಲಾಗುತ್ತಿದೆ. ರಜೆ ಹಾಗೂ ಇತರ ಸೌಲಭ್ಯಗಳನ್ನು ನಿರಾಕರಿಸಲಾಗುತ್ತಿದೆ. ಹಕ್ಕುಗಳಿಗಾಗಿ ಧ್ವನಿ ಎತ್ತಿದರೆ ಕೆಲಸದಿಂದ ವಜಾಗೊಳಿಸುವ ಬೆದರಿಕೆ ಹಾಕಲಾಗುತ್ತಿದೆ ಎಂದು ಆರೋಪಿಸಿದರು.
ಕಾರ್ಮಿಕರ ಶ್ರಮದಿಂದಲೇ ರಾಜ್ಯದ ಸಂಸ್ಥೆಗಳು ಮತ್ತು ಆರ್ಥಿಕ ವ್ಯವಸ್ಥೆ ಮುನ್ನಡೆಯುತ್ತಿವೆ. ಆದರೆ, ಸಂಪತ್ತನ್ನು ಸೃಷ್ಟಿಸುವ ಕಾರ್ಮಿಕರೇ ಕುಟುಂಬದ ಮನೆ ಬಾಡಿಗೆ, ಮಕ್ಕಳ ಶಾಲಾ ಶುಲ್ಕ ಹಾಗೂ ಔಷಧಿಗಳ ವೆಚ್ಚ ಭರಿಸಲಾಗದ ಸ್ಥಿತಿಯಲ್ಲಿದ್ದಾರೆ. ಮಾಸಿಕ ವೇತನ ಜೀವನ ನಿರ್ವಹಣೆಗೆ ಸಾಲದ ಕಾರಣ ಸಾಲ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಕನಿಷ್ಠ ವೇತನ ನೀಡದಿರುವುದು ಹಾಗೂ ಪಿಎಫ್ ಮತ್ತು ಇಎಸ್‌ಐನಂತಹ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ನಿರಾಕರಿಸುವುದು ಕಾರ್ಮಿಕರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡುತ್ತಿದೆ ಎಂದು ದೂರಿದರು.
ಸುಮಾರು 30 ವರ್ಷಗಳ ಹಿಂದಿನ ಶಂಕರ್ ಮುಖರ್ಜಿ ವಿರುದ್ಧ ಭಾರತ ಒಕ್ಕೂಟ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಗುತ್ತಿಗೆ ಕಾರ್ಮಿಕ ಪದ್ಧತಿಯನ್ನು ಜೀತ ಪದ್ಧತಿಯ ಸುಧಾರಿತ ರೂಪವೆಂದು ಬಣ್ಣಿಸಿತ್ತು. 2024ರ ಡಿಸೆಂಬರ್‌ನಲ್ಲಿ ಜಗ್ಗೋ ವಿರುದ್ಧ ಭಾರತ ಒಕ್ಕೂಟ ಪ್ರಕರಣದಲ್ಲಿಯೂ ನ್ಯಾಯಾಲಯ ಹೊರಗುತ್ತಿಗೆ ವ್ಯವಸ್ಥೆಯ ಮೂಲಕ ಕಾರ್ಮಿಕರ ಹಕ್ಕುಗಳನ್ನು ನಿರಾಕರಿಸುವ ಪ್ರವೃತ್ತಿಯನ್ನು ಖಂಡಿಸಿದೆ. ಖಾಯಂ ನೌಕರರಂತೆಯೇ ನಿರಂತರ ಮತ್ತು ಅಗತ್ಯ ಕೆಲಸ ನಿರ್ವಹಿಸುವ ಕಾರ್ಮಿಕರನ್ನು ತಾತ್ಕಾಲಿಕ ಅಥವಾ ಗುತ್ತಿಗೆ ನೌಕರರೆಂದು ಪರಿಗಣಿಸಿ ಶೋಷಿಸುವುದನ್ನು ನ್ಯಾಯಾಲಯ ಪ್ರಶ್ನಿಸಿದೆ ಎಂದು ಮೈತ್ರಿ ಕೃಷ್ಣನ್ ತಿಳಿಸಿದರು.
ಕನಿಷ್ಠ ವೇತನ ನೀಡದಿರುವುದು ಜೀತ ಪದ್ಧತಿಗೆ ಸಮಾನವಾದ ಪರಿಸ್ಥಿತಿಯನ್ನು ಸೃಷ್ಟಿಸುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಹಾಗಾದರೆ ಕಾರ್ಮಿಕರಿಗೆ ನ್ಯಾಯಯುತ ವೇತನ ನೀಡದೆ ಶೋಷಣೆಗೆ ಅವಕಾಶ ಮಾಡಿಕೊಡುತ್ತಿರುವ ಸರ್ಕಾರವೇ ಜೀತ ಪದ್ಧತಿಯನ್ನು ಅನುಸರಿಸುತ್ತಿದೆಯೇ ಎಂದು ಪ್ರಶ್ನಿಸಿದ ಅವರು, ಕಾರ್ಮಿಕರ ಹಕ್ಕುಗಳನ್ನು ರಕ್ಷಿಸುವಲ್ಲಿ ಸರ್ಕಾರ ಹೆಚ್ಚಿನ ಜವಾಬ್ದಾರಿ ವಹಿಸಬೇಕು ಎಂದು ಒತ್ತಾಯಿಸಿದರು.
ಗುತ್ತಿಗೆ ಮತ್ತು ಹೊರಗುತ್ತಿಗೆ ಕಾರ್ಮಿಕ ಪದ್ಧತಿಯನ್ನು ರದ್ದುಗೊಳಿಸುವುದು, ಎಲ್ಲಾ ಗುತ್ತಿಗೆ ಕಾರ್ಮಿಕರನ್ನು ನೇರ ವೇತನ ಪಾವತಿ ವ್ಯವಸ್ಥೆಗೆ ಒಳಪಡಿಸುವುದು, ಪರಿಷ್ಕೃತ ಕನಿಷ್ಠ ವೇತನ ಜಾರಿಗೊಳಿಸುವುದು, ಸಾಮಾಜಿಕ ಭದ್ರತೆ ಒದಗಿಸುವುದು ಹಾಗೂ ಮಾಸಿಕ 42 ಸಾವಿರ ರೂ. ಬದುಕುವ ವೇತನ ಖಾತರಿಪಡಿಸುವಂತೆ ಆಗ್ರಹಿಸಿ ಡಿಸೆಂಬರ್ 3ರಂದು ಗುರುವಾರ ಬೆಳಗಾವಿಯ ಸುವರ್ಣಸೌಧದ ಎದುರು ‘ಬೆಳಗಾವಿ ಚಲೋ’ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಾಗರಾಜ ಪೂಜಾರ್, ವೀರೇಶ, ಅಮರೇಶ, ಹುಸೇನಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.






