ರಾಯಚೂರು | ಪಾಲಿಕೆ ಸದಸ್ಯನ ಮೇಲೆ ಹಲ್ಲೆ ಆರೋಪ : ಗಂಗಾಮತ ಸಮಾಜದಿಂದ ಕಾನೂನು ಕ್ರಮಕ್ಕೆ ಒತ್ತಾಯ

ರಾಯಚೂರು : ಮಹಾನಗರ ಪಾಲಿಕೆ ಸದಸ್ಯ ಜಿಂದಪ್ಪ ಅವರ ಮೇಲೆ ನಡೆದ ಹಲ್ಲೆ ಪ್ರಕರಣದಲ್ಲಿ ಜಿ.ತಿಮ್ಮಾರೆಡ್ಡಿ ಮತ್ತು ಅವರ ಸಹಚರರನ್ನು ಕೂಡಲೇ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಗಂಗಾಮತಸ್ಥರ ಸೇವಾ ಸಂಘ ಮನವಿ ಸಲ್ಲಿಸಿದೆ.
ಪಾಲಿಕೆ ಕಚೇರಿಯಲ್ಲೇ ಮಹಾಪೌರರ ಉಪಸ್ಥಿತಿಯಲ್ಲಿ ತಿಮ್ಮಾರೆಡ್ಡಿ ಹಾಗೂ ಅವರ ಬಳಗ ಜಿಂದಪ್ಪ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು, ಕಚೇರಿಯ ಪೀಠೋಪಕರಣಗಳನ್ನು ಧ್ವಂಸ ಮಾಡಿದ್ದಾರೆ ಎಂದು ಸಂಘ ಆರೋಪಿಸಿದೆ.
ಜಿಂದಪ್ಪ ಅವರು ಸಮಾಜದಲ್ಲಿ ಸುಸಂಸ್ಕೃತ, ಸೌಜನ್ಯಯುತ ವ್ಯಕ್ತಿಯಾಗಿದ್ದು, ಗಂಗಾಮತ ಸಮಾಜದ ಹಿರಿಯ ಮುಖಂಡರಾಗಿದ್ದಾರೆ. ಅವರ ಮೇಲೆ ನಡೆದ ದೌರ್ಜನ್ಯವನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದು ಸಂಘದ ಪ್ರತಿನಿಧಿಗಳು ಮನವಿಯಲ್ಲಿ ತಿಳಿಸಿದ್ದಾರೆ.
ಹಲ್ಲೆಗಾರರನ್ನು ಗಂಭೀರವಾಗಿ ಪರಿಗಣಿಸಿ ಬಂಧಿಸದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸುವುದಾಗಿ ಎಚ್ಚರಿಸಿದ್ದಾರೆ. ತಿಮ್ಮಾರೆಡ್ಡಿ ಇವರು ಮುಂಚೆಯೂ ಅನೇಕ ಮುಗ್ಧರ ಮೇಲೆ ಹಲ್ಲೆ ನಡೆಸಿದ್ದಾರೆ. ಈಗಾಗಲೇ ಕೆಲವು ಪ್ರಕರಣಗಳು ದಾಖಲಾಗಿವೆ. ಅವರ ವಿರುದ್ಧ ಗುಂಡಾ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.
ಮನವಿ ಸಲ್ಲಿಕೆ ಸಂದರ್ಭದಲ್ಲಿ ಜಿಲ್ಲಾ ಗಂಗಾಮತ ಸಮಾಜದ ಅಧ್ಯಕ್ಷ ಕೆ. ಶಾಂತಪ್ಪ, ಮುಖಂಡರಾದ ಕೆ. ಶರಣಪ್ಪ ಕಲ್ಮಲಾ, ಕಡಗೋಲ್ ಅಂಜನೇಯ, ಕಡಗೋಲ್ ಶರಣಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.







