ರಾಯಚೂರು | ರಸಗೊಬ್ಬರ ನೀಡಲು ಲಂಚದ ಆರೋಪ; ಎಣ್ಣೆ ಕಾಳು ಬೆಳಗಾರರ ಸಂಘ, ಕೃಷಿ ಪ್ರಾಥಮಿಕ ಸಹಕಾರ ಕೇಂದ್ರಕ್ಕೆ ರೈತರಿಂದ ಮುತ್ತಿಗೆ

ರಾಯಚೂರು: ಜಿಲ್ಲೆಯ ಮಸ್ಕಿ ತಾಲ್ಲೂಕು ತೋರಣದಿನ್ನಿಯ ಎಣ್ಣೆ ಮಾರಾಟ ಬೆಳಗಾರರ ಸಹಕಾರ ಸಂಘ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ರಸಗೊಬ್ಬರಕ್ಕಾಗಿ ರೈತರು ಗೊಬ್ಬರಕ್ಕಾಗಿ ಸರದಿ ಸಾಲಿನಲ್ಲಿ ಗಂಟೆಗಟ್ಟಲೆ ನಿಂತರೂ ಅಧಿಕಾರಿಗಳು ಇಲ್ಲದ ಸಲ್ಲದ ನೆಪ ಹೇಳಿ ತಾರತಮ್ಯ ಮಾಡಿದ್ದಾರೆ ಎಂದು ರೊಚ್ಚಿಗೆದ್ದು ಅಧಿಕಾರಿಗಳನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡು ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ನೂರಾರು ರೈತರು ಕೃಷಿ ಕೆಲಸ ಬಿಟ್ಟು ಗೊಬ್ಬರಕ್ಕಾಗಿ ಸರದಿ ಸಾಲಿನಲ್ಲಿ ಗಂಟೆಗಟ್ಟಲೆ ನಿಂತರೂ ಕೊನೆಗೆ ಗೊಬ್ಬರ ಖಾಲಿಯಾಗಿದೆ, ಉಳಿದ ಗೊಬ್ಬರ ಬೇಕಿದ್ದರೆ ಮೆಂಬರ್ ಶಿಪ್ ಆಗಬೇಕು ಇಲ್ಲದಿದ್ದರೆ ಶಾಸಕರ, ಜನಪ್ರತಿನಿಧಿಗಳ ಶಿಫಾರಸು ತಂದರೇ ಗೊಬ್ಬರ ನೀಡಲಾಗುವುದು ಎಂದು ಅಲ್ಲಿಯ ಎಣ್ಣೆ ಕಾಳು ಮಾರಾಟ ಸಂಘದ ಕಾರ್ಯದರ್ಶಿ ಬಸಯ್ಯಸ್ವಾಮಿ ಹೇಳಿದ್ದಾರೆಂದು ಎಂದು ಆಕ್ರೋಶ ವ್ಯಕ್ತಪಡಿಸಿದರು,
ಸರಕಾರದಿಂದ ಬಂದಿರುವ ಗೊಬ್ಬರವನ್ನು ರೈತರಿಗೆ ಕೊಡುವುದು ಬಿಟ್ಟು, ಬರೀ ದೊಡ್ಡ ದೊಡ್ಡ ಶ್ರೀಮಂತರಿಗೆ, ಪ್ರಭಾವಿ ರಾಜಕಾರಣಿಗಳಿಗೆ ಗೊಬ್ಬರವನ್ನು ಅರವತ್ತು ಚೀಲ, ನಲವತ್ತು ಚೀಲ ಕೊಟ್ಟು, ಇವಾಗ ನಿಜವಾದ ರೈತರಿಗೆ ಗೊಬ್ಬರ ಕೇಳಿದರೆ ನಿರಾಕರಿಸಲಾಗುತ್ತಿದೆ ಎಂದು ರೈತರು ಆರೋಪಿಸಿದ್ದಾರೆ.
ಈ ವೇಳೆ ರೈತರಾದ ಹುಸೇನಪ್ಪ ತಳವಾರ, ರಾಮಣ್ಣ ಕಾಶಿಮಯ್ಯ, ಯಂಕೊಬ ಬಾರಿಕೇರ, ಹನುಮೇಶ ಗ್ರಾಮ ಪಂಚಾಯತ್ ಸದಸ್ಯ, ಗಂಗಾಧರ ಬಾರಕೇರ, ಬಸವರಾಜ ಜಿನ್ನಾಪೂರ, ರವಿಕುಮಾರಸ್ವಾಮಿ, ನಾಗಪ್ಪ ಪೂಜಾರಿ, ದೇವಣ್ಣ ಪಾಲ್ಗೊಂಡಿದ್ದರು.







