ರಾಯಚೂರು | ರೈತರಿಂದ ತಾಡಪತ್ರಿ ನೀಡಲು ಹಣ ವಸೂಲಿ ಆರೋಪ ; ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳ ವಿರುದ್ದ ಆಕ್ರೋಶ

ರಾಯಚೂರು: ಲಿಂಗಸುಗೂರು ತಾಲೂಕಿನ ಗುರುಗುಂಟ ಗ್ರಾಮದ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ನೀಡುವ ಉಪಕರಣಗಳ ಹಂಚಿಕೆಯಲ್ಲಿ ಲಂಚ ಬೇಡಿಕೆಯ ಆರೋಪ ಕೇಳಿಬಂದಿದೆ.
ಕೇಂದ್ರದ ಸಿಬ್ಬಂದಿಗಳು ತಾಡಪತ್ರಿ, ಪೈಪ್ ಲೈನ್ ಹಾಗೂ ಇತರ ಸಾಮಗ್ರಿ ಪಡೆಯಲು ಪ್ರತಿ ರೈತನಿಂದ ಸುಮಾರು 300 ರೂ. ಲಂಚ ವಸೂಲಿ ಮಾಡಿದರೆಂಬ ಆರೋಪ ಕೇಳಿಬಂದಿದೆ.
ಮಾಹಿತಿಯ ಪ್ರಕಾರ, ಹಲವಾರು ರೈತರು ಡಿಡಿ (ಡಿಮಾಂಡ್ ಡ್ರಾಫ್ಟ್) ಮೂಲಕ ಮೊತ್ತವನ್ನು ಪಾವತಿಸಿದ ನಂತರವೂ, ಸಿಬ್ಬಂದಿ ಹೆಚ್ಚುವರಿ ಹಣ ಕೇಳುತ್ತಿದ್ದರೆಂದು ತಿಳಿದುಬಂದಿದೆ. ಈ ಕುರಿತು ಪ್ರಶ್ನಿಸಿದಾಗ, "ಜೆರಾಕ್ಸ್, ಫೋಟೋ ಖರ್ಚು" ಎಂದು ಉತ್ತರ ನೀಡಿ ಹಣ ವಸೂಲಿ ಮಾಡುತ್ತಿದ್ದರೆಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ರೈತರ ಜೊತೆ ಮಾತಿನ ಚಕಮಕಿ ಮುಂದುವರೆದ ನಂತರ, ಸಿಬ್ಬಂದಿಗಳು ಹಣವನ್ನು ವಾಪಸ್ ನೀಡಲು ಒಪ್ಪಿಕೊಂಡಿದ್ದಾರೆ. ಈಗಾಗಲೇ ಸುಮಾರು 50ಕ್ಕೂ ಹೆಚ್ಚು ರೈತರಿಗೆ ವಸೂಲಾದ ಹಣ ಹಿಂತಿರುಗಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಘಟನೆಯ ಹಿನ್ನೆಲೆಯಲ್ಲಿ, ರೈತ ಸಂಪರ್ಕ ಕೇಂದ್ರದ ಕಾರ್ಯಪದ್ಧತಿ ಹಾಗೂ ಲಂಚ ಬೇಡಿಕೆಯ ಕುರಿತು ಮೇಲಾಧಿಕಾರಿಗಳು ತನಿಖೆ ನಡೆಸಬೇಕೆಂದು ರೈತರು ಆಗ್ರಹಿಸಿದ್ದಾರೆ.





