ರಾಯಚೂರು | ಸರಕಾರಿ ಜಾಗದಲ್ಲಿ ಅನಧಿಕೃತ ಕಟ್ಟಡ ನಿರ್ಮಿಸಿ ಬಾಡಿಗೆ ವಸೂಲಿ : ಆರೋಪ

ರಾಯಚೂರು: ರಾಯಚೂರು ತಾಲೂಕಿನ ಗಿಲ್ಲೆಸೂಗೂರು ಗ್ರಾಮ ವ್ಯಾಪ್ತಿಯ ಸರ್ವೆ 75 ರಲ್ಲಿ ಇರುವ ಸರ್ಕಾರಿ ಜಮೀನನ್ನು ಗ್ರಾಮ ಪಂಚಾಯತ್ ಅಧ್ಯಕ್ಷೆ ಮಹಾದೇವಿ, ಅವರ ಪತಿ ಮಲ್ಲೇಶ ಹಾಗೂ ಸಂಬಂಧಿ ಶಿವಶಂಕರ ಇವರು ಅನಧಿಕೃತ ಕಟ್ಟಡಗಳನ್ನು ನಿರ್ಮಾಣ ಮಾಡಿ ಬಾಡಿಗೆ ವಸೂಲಿ ಮಾಡುತ್ತಿದ್ದು, ಕೂಡಲೇ ತೆರವುಗೊಳಿಸಬೇಕೆಂದು ಸಮಾಜಿಕ ಕಾರ್ಯಕರ್ತ ಅಂಬಾಜಿರಾವ್ ಮೈದನಕರ್ ಆಗ್ರಹಿಸಿದರು.
ಅವರಿಂದು ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿ, ಕಳೆದ ಒಂದು ವರ್ಷ ಹಿಂದೆಯೇ ದೂರು ನೀಡಿದ್ದರೂ ತಹಶೀಲ್ದಾರರು, ಗ್ರಾಮ ಪಂಚಾಯತ್ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಸರ್ಕಾರಿ ಜಾಗದಲ್ಲಿ ಆರು ಮಳಿಗೆ, ಆರು ಮನೆಗಳನ್ನು ನಿರ್ಮಿಸಲಾಗಿದೆ. ಬಾಡಿಗೆ ಹಣ ಪಂಚಾಯತ್‌ಗೆ ಜಮಾ ಮಾಡದೇ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.
ಕೂಡಲೇ ಅನಧೀಕೃತ ಹಣವಸೂಲಿ ತಡೆದು ಕ್ರಿಮಿನಲ್ ಕೇಸ್ ದಾಖಲಿಸಿ ಹಣವಸೂಲಿ ಮಾಡಬೇಕು. ಪಂಚಾಯತ್ ಪಿಡಿಓ ಸೇರಿದಂತೆ ಸಂಬಂಧಿತ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು. ಸರ್ಕಾರಿ ಭೂಮಿಯನ್ನು ವಿವಿಧ ಇಲಾಖೆ ಕಟ್ಟಡಗಳಿಗೆ ಮಂಜೂರಾತಿ ಮಾಡಿದ್ದು, ನಿರ್ಮಾಣ ಕಾಮಗಾರಿ ಪ್ರಾರಂಭಿಸಬೇಕು. ಇಲ್ಲದೇ ಹೋದಲ್ಲಿ ಡಿಸಿ ಕಚೇರಿ ಮುಂದೆ ಹೋರಾಟ ನಡೆಸುವುದಾಗಿ ಅವರು ಹೇಳಿದರು.
ಈ ಸಂದರ್ಭದಲ್ಲಿ ಜಯ ಕರ್ನಾಟಕ ಜನಪರ ವೇದಿಕೆ ಅಧ್ಯಕ್ಷ ಜಂಬಣ್ಣ ಜಲ್ದಾರ, ಮಸೂದ್ ಅಲಿ, ಚಂದ್ರಬಾಬು ಇದ್ದರು.





