ರಾಯಚೂರು ಎಡಿಸಿ ಶಿವಾನಂದ ಭಜಂತ್ರಿ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳ ವರ್ಗಾವಣೆ

ಶಿವಾನಂದ ಭಜಂತ್ರಿ
ರಾಯಚೂರು: ಜಿಲ್ಲೆಯ ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ, ಗ್ರೇಡ್-1 ತಹಶೀಲ್ದಾರ್ ಸುರೇಶ್ ವರ್ಮಾ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ರಾಯಚೂರಿನ ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಯಲ್ಲಪ್ಪ ಭಜಂತ್ರಿ ಅವರನ್ನು ಧಾರವಾಡದಲ್ಲಿರುವ ಕರ್ನಾಟಕ ನೀರಾವರಿ ನಿಗಮ ನಿಯಮಿತದ ಕೇಂದ್ರ ಕಚೇರಿಯ ಮುಖ್ಯ ಆಡಳಿತಾಧಿಕಾರಿ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ. ಅವರ ತೆರವಾದ ಸ್ಥಾನಕ್ಕೆ ಬಾಗಲಕೋಟೆ ವಿಶ್ವವಿದ್ಯಾಲಯದ ಕುಲಸಚಿವ ಸೋಮಲಿಂಗ ಗೋಪಾಲ ಗೆಣ್ಣೂರ ಅವರನ್ನು ನೇಮಕ ಮಾಡಲಾಗಿದೆ.
ರಾಯಚೂರು ಮಹಾನಗರ ಪಾಲಿಕೆಯ ತಹಶೀಲ್ದಾರ್ ಸಂತೋಷ್ ರಾಣಿ ಅವರನ್ನು ಕಲಬುರಗಿ ಜಿಲ್ಲಾ ಪಂಚಾಯಿತಿಯ ಸಹಾಯಕ ಕಾರ್ಯದರ್ಶಿ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ. ರಾಯಚೂರು ತಾಲೂಕು ಗ್ರೇಡ್-1 ತಹಶೀಲ್ದಾರ್ ಸುರೇಶ್ ವರ್ಮಾ ಅವರನ್ನು ದೇವದುರ್ಗದ ಕೃಷ್ಣಾ ಮೇಲ್ದಂಡೆ ಯೋಜನೆಯ ವಿಶೇಷ ಭೂಸ್ವಾಧೀನಾಧಿಕಾರಿ ಹುದ್ದೆಗೆ ವರ್ಗಾಯಿಸಲಾಗಿದೆ.
ದೇವದುರ್ಗದ ಗ್ರೇಡ್-1 ತಹಶೀಲ್ದಾರ್ ನಾಗಮ್ಮ ಅವರನ್ನು ಕೊಪ್ಪಳ ಜಿಲ್ಲಾ ಪಂಚಾಯಿತಿಯ ಕಾರ್ಯದರ್ಶಿ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ. ಸಿಂಧನೂರಿನ ಮುನಿರಾಬಾದ್–ಮಹೆಬೂಬ್ ನಗರ ರೈಲು ಮಾರ್ಗ ಯೋಜನೆಯ ವಿಶೇಷ ತಹಶೀಲ್ದಾರ್ ಹಾಗೂ ವಿಶೇಷ ಭೂಸ್ವಾಧೀನಾಧಿಕಾರಿ ಶೃತಿ ಅವರನ್ನು ರಾಯಚೂರು ಜಿಲ್ಲಾ ಪಂಚಾಯಿತಿಯ ಸಹಾಯಕ ಕಾರ್ಯದರ್ಶಿ ಹುದ್ದೆಗೆ ವರ್ಗಾಯಿಸಲಾಗಿದೆ. ಶೃತಿ ಅವರ ತೆರವಾದ ಸ್ಥಾನಕ್ಕೆ ಚಿತ್ತಾಪುರದ ಗ್ರೇಡ್-1 ತಹಶೀಲ್ದಾರ್ ನಾಗಯ್ಯ ಅವರನ್ನು ನೇಮಕ ಮಾಡಲಾಗಿದೆ.
ಶಾಲಾ ಶಿಕ್ಷಣ ಇಲಾಖೆಯ (ಆಡಳಿತ) ಉಪನಿರ್ದೇಶಕ ಮಲ್ಲಿಕಾರ್ಜುನ ಅವರನ್ನು ಕಲಬುರಗಿಯ ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತರ ಕಚೇರಿಯ ಜಂಟಿ ನಿರ್ದೇಶಕ (ಪರೀಕ್ಷೆ) ಹುದ್ದೆಗೆ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.






