ರಾಯಚೂರು | ಎಸ್‌ಐಆರ್ ಅಭಿಯಾನಕ್ಕೆ ಚಾಲನೆ : ಹಲವು ಗಣ್ಯರಿಗೆ ಎಸ್‌ಐಆರ್ ಎನ್ಯೂಮರೇಶನ್ ನಮೂನೆ ವಿತರಣೆ

ರಾಯಚೂರು : ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎನ್ಯೂಮರೇಶನ್ ಪ್ರಕ್ರಿಯೆಯಲ್ಲಿ ಸಾರ್ವಜನಿಕರ ಸಕ್ರಿಯ ಭಾಗವಹಿಸುವಿಕೆಗೆ ಉತ್ತೇಜನ ನೀಡುವ ಉದ್ದೇಶದಿಂದ ಅಪರ ಜಿಲ್ಲಾಧಿಕಾರಿ ಶಿವಾನಂದ ಅವರು ಜೂನ್ 30ರ ಮಂಗಳವಾರದಂದು ರಾಯಚೂರು ಜಿಲ್ಲೆಯ ಮಾನ್ವಿ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಗಣ್ಯರಿಗೆ ಎಸ್‌ಐಆರ್ ಎನ್ಯೂಮರೇಶನ್ ನಮೂನೆಗಳನ್ನು ವಿತರಿಸುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು.
ಈ ವೇಳೆ ಮಾನ್ವಿ ನಿವಾಸಿಯಾದ ಪರಸಪ್ಪ ಬೆನಕನ್ ಅವರಿಗೆ ಎಸ್‌ಐಆರ್ ಎನ್ಯೂಮರೇಶನ್ ನಮೂನೆಗಳನ್ನು ಅಪರ ಜಿಲ್ಲಾಧಿಕಾರಿಗಳು ವಿತರಿಸಿದರು.
ಬಳಿಕ ಮಾತನಾಡಿದ ಅಪರ ಜಿಲ್ಲಾಧಿಕಾರಿ ಶಿವಾನಂದ ಅವರು, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆ ಯಶಸ್ವಿಯಾಗಲು ಸಾರ್ವಜನಿಕರ ಸಹಕಾರ ಅತ್ಯಂತ ಅಗತ್ಯವಾಗಿದೆ. ಪ್ರತಿಯೊಬ್ಬ ಅರ್ಹ ಮತದಾರರು ಎಸ್‌ಐಆರ್ ಎನ್ಯೂಮರೇಶನ್ ನಮೂನೆಯನ್ನು ಸರಿಯಾಗಿ ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ನಿಗದಿತ ಅವಧಿಯೊಳಗೆ ಸಲ್ಲಿಸುವ ಮೂಲಕ ಚುನಾವಣಾ ಪ್ರಕ್ರಿಯೆಯನ್ನು ಇನ್ನಷ್ಟು ಪಾರದರ್ಶಕ ಹಾಗೂ ಸಮರ್ಪಕವಾಗಿಸಲು ಕೈಜೋಡಿಸಬೇಕು ಎಂದು ಕರೆ ನೀಡಿದರು.
ಸಮಾಜದ ವಿವಿಧ ಕ್ಷೇತ್ರಗಳ ಗಣ್ಯರು ಈ ಅಭಿಯಾನದಲ್ಲಿ ಭಾಗವಹಿಸುವುದರಿಂದ ಸಾರ್ವಜನಿಕರಲ್ಲಿ ಜಾಗೃತಿ ಹೆಚ್ಚಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕರು ಎಸ್‌ಐಆರ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ವಿಶ್ವಾಸವಿದೆ ಎಂದು ತಿಳಿಸಿದರು.
ಜೂನ್ 30 ರಿಂದ ಜುಲೈ 29ರವರೆಗೆ ಬಿ.ಎಲ್.ಒ.ಗಳು ಮನೆ ಮನೆಗೆ ಭೇಟಿ ನೀಡಿ ಸಮೀಕ್ಷೆ ಹಾಗೂ ಪರಿಶೀಲನೆ ನಡೆಸಲಿದ್ದಾರೆ. ತದನಂತರ ಆಗಸ್ಟ್ 5ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು. ಆಯೋಗದ ಮಾರ್ಗಸೂಚಿಯಂತೆ 2002ರ ಮತದಾರರ ಪಟ್ಟಿಯನ್ನು ಮಾನದಂಡವಾಗಿಟ್ಟುಕೊಂಡು ಪ್ರಸ್ತುತ ಇರುವ 2025ರ ಮತದಾರರ ಪಟ್ಟಿಯೊಂದಿಗೆ ಹೋಲಿಕೆ ಹಾಗೂ ಮ್ಯಾಪಿಂಗ್ ಪ್ರಕ್ರಿಯೆ ನಡೆಸಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ರಾಯಚೂರು ವಿಭಾಗದ ಸಹಾಯಕ ಆಯುಕ್ತ ಡಾ.ಹಂಪಣ್ಣ ಸಜ್ಜನ್, ಮಾನ್ವಿ ತಹಶೀಲ್ದಾರ್ ಭೀಮರಾಯ್ಯ ರಾಮಸಮುದ್ರ ಸೇರಿದಂತೆ ಬಿಎಲ್‌ಒ ಇದ್ದರು.
ವಿವಿಧ ಗಣ್ಯರಿಗೆ ಎಸ್‌ಐಆರ್ ಎನ್ಯೂಮರೇಶನ್ ನಮೂನೆ ವಿತರಣೆ: ಜಿಲ್ಲೆಯ ವಿವಿಧ ಗಣ್ಯರಿಗೆ ಎಸ್‌ಐಆರ್ ಎನ್ಯೂಮರೇಶನ್ ನಮೂನೆಗಳನ್ನು ವಿವಿಧ ಅಧಿಕಾರಿಗಳಿಂದ ಮಂಗಳವಾರದಂದು ವಿತರಿಸಲಾಯಿತು.
ಲಿಂಗಸುಗೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಡಿ.ಎಸ್.ಹುಲಿಗೇರಿ ಅವರಿಗೆ ಲಿಂಗಸುಗೂರು ವಿಭಾಗದ ಸಹಾಯಕ ಆಯುಕ್ತರಾದ ಬಸವಣ್ಣೇಪ್ಪ ಕಲಶೆಟ್ಟಿ ಅವರು ಎಸ್‌ಐಆರ್ ಎನ್ಯೂಮರೇಶನ್ ನಮೂನೆಗಳನ್ನು ವಿತರಿಸಿದರು.
ರಾಯಚೂರು ನಗರದ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಶಿವರಾಜ ಎಸ್.ಪಾಟೀಲ್ ಅವರಿಗೆ ರಾಯಚೂರು ತಹಶೀಲ್ದಾರ್ ಸುರೇಶ ವರ್ಮಾ ಎಸ್‌ಐಆರ್ ಎನ್ಯೂಮರೇಶನ್ ನಮೂನೆಗಳನ್ನು ವಿತರಿಸಿದರು.
ಸಿಂಧನೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಹಂಪನಗೌಡ ಬಾದರ್ಲಿ ಅವರಿಗೆ ಸಿಂಧನೂರು ತಹಶೀಲ್ದಾರ್ ಅರುಣ್ ಕುಮಾರ್ ದೇಸಾಯಿ ಅವರು ಎಸ್‌ಐಆರ್ ಎನ್ಯೂಮರೇಶನ್ ನಮೂನೆಗಳನ್ನು ವಿತರಿಸಿದರು.
ಮಾನ್ವಿ ವಿಧಾನಸಭಾ ಕ್ಷೇತ್ರದ ಶಾಸಕ ಹಂಪಯ್ಯ ನಾಯಕ ಅವರಿಗೆ ರಾಯಚೂರು ವಿಭಾಗದ ಸಹಾಯಕ ಆಯುಕ್ತರಾದ ಡಾ.ಹಂಪಣ್ಣ ಸಜ್ಜನ್, ಮಾನ್ವಿ ತಹಶೀಲ್ದಾರ್ ಅಶೋಕ ಪವಾರ್ ಅವರು ಎಸ್‌ಐಆರ್ ಎನ್ಯೂಮರೇಶನ್ ನಮೂನೆಗಳನ್ನು ವಿತರಿಸಿದರು.
ಮಸ್ಕಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಆರ್.ಬಸನಗೌಡ ತುರ್ವಿಹಾಳ ಅವರಿಗೆ ಮಸ್ಕಿ ತಹಶೀಲ್ದಾರ್ ಮಂಜುನಾಥ ಭೋಗವಂತಿ ಅವರು ಎಸ್‌ಐಆರ್ ಎನ್ಯೂಮರೇಶನ್ ನಮೂನೆಗಳನ್ನು ವಿತರಿಸಿದರು.






