Raichur | ಸ್ಪರ್ಧಾತ್ಮಕ ಪರೀಕ್ಷೆಗೆ ಸರಿಯಾದ ಅಧ್ಯಯನ ವಿಧಾನ ಅಳವಡಿಸಿಕೊಳ್ಳಿ: ಕೃಷ್ಣ ಶಾವಂತಗೇರಿ
ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗಾಗಿ ಒಂದು ದಿನದ ಕಾರ್ಯಾಗಾರ

ರಾಯಚೂರು: ಸರ್ಕಾರಿ ಉದ್ಯೋಗ ಪಡೆಯಲು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ಅಭ್ಯರ್ಥಿಗಳು ಸರಿಯಾದ ಅಧ್ಯಯನ ವಿಧಾನ, ಪರೀಕ್ಷಾ ತಂತ್ರ ಹಾಗೂ ಸಮಯ ನಿರ್ವಹಣೆಯನ್ನು ಅಳವಡಿಸಿಕೊಳ್ಳಬೇಕು ಎಂದು ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೃಷ್ಣ ಶಾವಂತಗೇರಿ ಸಲಹೆ ನೀಡಿದರು.
ನಗರದ ಇಸ್ಲಾಮಿಕ್ ಸೆಂಟರ್‌ನಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಮುಸ್ಲಿಂ ನೌಕರರ ಕ್ಷೇಮಾಭಿವೃದ್ಧಿ ಸಂಘದ ರಾಯಚೂರು ಜಿಲ್ಲಾ ಘಟಕ ಭಾನುವಾರ ಆಯೋಜಿಸಿದ್ದ ‘ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗಾಗಿ ಒಂದು ದಿನದ ಕಾರ್ಯಾಗಾರ’ ಉದ್ಘಾಟಿಸಿ ಅವರು ಮಾತನಾಡಿದರು.
ಸಹಾಯಕ ಪ್ರಾಧ್ಯಾಪಕ ಅಮರೇಶ್ ಪೊತ್ನಾಳ್ ಅವರು ‘ಸ್ಪರ್ಧಾತ್ಮಕ ಅಭ್ಯರ್ಥಿಗಳು ಏನು ಅಧ್ಯಯನ ಮಾಡಬೇಕು ಮತ್ತು ಹೇಗೆ ಅಧ್ಯಯನ ಮಾಡಬೇಕು’ ಎಂಬ ವಿಷಯದ ಕುರಿತು ತರಬೇತಿ ನೀಡಿ, ಪರೀಕ್ಷಾ ಸಿದ್ಧತೆಗೆ ಅಗತ್ಯವಾದ ಅಧ್ಯಯನ ವಿಧಾನಗಳು, ವಿಷಯಗಳ ಆಯ್ಕೆ ಹಾಗೂ ಪರಿಣಾಮಕಾರಿ ಓದುವ ತಂತ್ರಗಳ ಬಗ್ಗೆ ಮಾಹಿತಿ ನೀಡಿದರು.
ಡಾ. ರಜಾಕ್ ಉಸ್ತಾದ್ ಅವರು ‘Importance of Document’ ವಿಷಯದ ಕುರಿತು ಮಾತನಾಡಿ, ಸರ್ಕಾರಿ ನೇಮಕಾತಿ ಪ್ರಕ್ರಿಯೆಯಲ್ಲಿ ಅಗತ್ಯ ದಾಖಲೆಗಳ ಮಹತ್ವ ಹಾಗೂ ಅವುಗಳನ್ನು ಮುಂಚಿತವಾಗಿಯೇ ಸಿದ್ಧಪಡಿಸಿಕೊಳ್ಳುವ ಅಗತ್ಯವನ್ನು ವಿವರಿಸಿದರು.
ಸಂಘದ ಜಿಲ್ಲಾಧ್ಯಕ್ಷ ಡಾ. ಸೈಯದ್ ಮಿನ್ಹಾಜ್ ಉಲ್ ಹಸನ್ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷಾ ಅಭ್ಯರ್ಥಿಗಳು ಆತ್ಮವಿಶ್ವಾಸ, ನಿರಂತರ ಪರಿಶ್ರಮ ಮತ್ತು ಸರಿಯಾದ ಮಾರ್ಗದರ್ಶನದೊಂದಿಗೆ ಸರ್ಕಾರಿ ಉದ್ಯೋಗದ ಗುರಿ ಸಾಧಿಸಲು ಮುಂದಾಗಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಸಹಾಯಕ ಪ್ರಾಧ್ಯಾಪಕ ಡಾ. ಶಿವರಾಜ್ ಕೊಪ್ಪರ್, ಮುಖಂಡ ಮೊಹಮ್ಮದ್ ಇಕ್ಬಾಲ್ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಉದ್ಯೋಗಾಕಾಂಕ್ಷಿಗಳು ಭಾಗವಹಿಸಿದ್ದರು.






