ರಾಯಚೂರು : ಕೇಂದ್ರ ಸರಕಾರದ 4 ಕಾರ್ಮಿಕ ಸಂಹಿತೆಗಳ ವಿರುದ್ಧ ಎಐಸಿಸಿಟಿಯು ಪ್ರತಿಭಟನೆ

ರಾಯಚೂರು: ಕೇಂದ್ರ ಸರಕಾರ ಜಾರಿಗೊಳಿಸಿರುವ 4 ಕಾರ್ಮಿಕ ಸಂಹಿತೆಗೆ ವಿರೋಧ ವ್ಯಕ್ತಪಡಿಸಿರುವ ಎಐಸಿಸಿಟಿಯು, ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಸುಟ್ಟು ಹಾಕುವ ಮೂಲಕ ಇಂದು ನಗರದ ಟಿಪ್ಪು ಸುಲ್ತಾನ್ ಗಾರ್ಡನ್ ಮುಂದೆ ಎಐಸಿಸಿಟಿಯು ಪ್ರತಿಭಟನೆ ನಡೆಸಿತು.
ಪ್ರತಿಭಟನಾನಿರತರು ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ದೇಶಾದ್ಯಂತ ಕಾರ್ಮಿಕರು ಮತ್ತು ಕಾರ್ಮಿಕ ಪರ ಸಂಘಟನೆಗಳು ಟ್ರೇಡ್ ಯೂನಿಯನ್ ಗಳು ಈಗಾಗಲೇ ಭಾರಿ ಪ್ರತಿರೋಧ ಒಡ್ಡಿದಾಗಲೂ ಹೋರಾಟ ಮಾಡಿದಾಗಲೂ ಕಾರ್ಮಿಕರ ಹೋರಾಟವನ್ನು ಲೆಕ್ಕಿಸದೆ ಕೇಂದ್ರ ಸರಕಾರ ಈ ನಾಲ್ಕು ಸಂಹಿತೆಗಳನ್ನು ಜಾರಿಗೊಳಿಸಿದೆ. ಇದು ಕಾರ್ಮಿಕ ವಿರೋಧಿ ಸಂಹಿತೆ ಎಂದು ದೂರಿದರು.
ಕಾರ್ಮಿಕ ಕಾಯ್ದೆಯಿಂದ ಸಿಗಬೇಕಾದ ಎಲ್ಲಾ ಹಕ್ಕುಗಳನ್ನು ಕಸಿದು ಕಾರ್ಮಿಕರನ್ನು ಕಾರ್ಮಿಕ ಕುಟುಂಬಗಳನ್ನು ಬೀದಿಪಾಲು ಮಾಡುವ ಈ ನಾಲ್ಕು ಸಂಹಿತೆಗಳನ್ನು ಜಾರಿಗೆ ತರಲು ಬಿಡುವುದಿಲ್ಲ ಎಂದು ಪ್ರತಿಭಟನಾಕಾರರು ಹೇಳಿದರು.
ತಕ್ಷಣ ಕೇಂದ್ರ ಸರಕಾರ ಈ ಕಾಯ್ದೆ ಹಿಂಪಡೆಯದಿದ್ದಲ್ಲಿ ದೇಶಾದ್ಯಂತ ಕಾರ್ಮಿಕರು, ಕಾರ್ಮಿಕ ಸಂಘಟನೆಗಳಿಂದ ಬಹುದೊಡ್ಡ ಹೋರಾಟಕ್ಕೆ ಕರೆ ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಎಐಸಿಸಿಟಿಯು ಜಿಲ್ಲಾಧ್ಯಕ್ಷ ಅಝೀಝ್ ಜಾಗೀರ್ದಾರ್, ಮುಖಂಡರಾದ ಜೀಲಾನಿ ಪಾಷಾ, ಜಗದೀಶ್, ನಿಸಾರ್ ಅಹ್ಮದ್, ಭೀಮಣ್ಣ, ಮುಹಮ್ಮದ್ ಮೂವೀಸ್, ಹನೀಫ್ ಅಬಕಾರಿ, ಮಾರಣ್ಣ ಉಪಸ್ಥಿತರಿದ್ದರು







