ರಾಯಚೂರು | ರಸ್ತೆ ಇಲ್ಲದೇ ಐದನಾಳರ್ ದೊಡ್ಡಿ ಜನರ ಪರದಾಟ

ರಾಯಚೂರು: ಜಿಲ್ಲೆಯ ಲಿಂಗಸುಗೂರ ತಾಲೂಕಿನ ಗುಂತಗೋಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಐದನಾಳರ್ ದೊಡ್ಡಿಯಲ್ಲಿ ವಾಸಿಸುವ ಜನರು ಹಲವು ವರ್ಷಗಳಿಂದ ಸುರಕ್ಷಿತ ರಸ್ತೆಯಿಲ್ಲದೇ ಪರದಾಡುತ್ತಿದ್ದಾರೆ. ಮೂಲಭೂತ ಸೌಕರ್ಯವಿಲ್ಲದೆ ಕಾಲುದಾರಿ ಮೂಲಕ ಹಳ್ಳ ದಾಟಿ ಹೋಗುವುದು ಇವರ ದಿನಚರಿಯಾಗಿಯೇ ಮಾರ್ಪಟ್ಟಿದೆ.
ಗುಂತಗೋಳ ಗ್ರಾಮದಿಂದ 6 ಕಿ.ಮೀ. ದೂರದಲ್ಲಿರುವ ಈ ದೊಡ್ಡಿಯಲ್ಲಿ ಹಾಲುಮತ ಸಮಾಜದ 80ಕ್ಕೂ ಹೆಚ್ಚು ಜನರು ವಾಸಮಾಡುತ್ತಿದ್ದಾರೆ. ಪಡಿತರ ಚೀಟಿಯುಳ್ಳವರು ನ್ಯಾಯಬೆಲೆ ಅಂಗಡಿಯಿಂದ ಆಹಾರ ಸಾಮಗ್ರಿಗಳನ್ನು ತರಲು ಆರು ಕಿಲೋಮೀಟರ್ ನಡೆದುಕೊಂಡೇ ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ. ರಾತ್ರಿ ವೇಳೆ ಹಾವು-ಚೋಳ ಭೀತಿಯಿಂದ ದಾರಿಯಲ್ಲಿ ಓಡಾಡುವುದು ಇನ್ನಷ್ಟು ಕಷ್ಟಕರವಾಗಿದೆ.
ಮಳೆ ಬಂದರೆ ಹಳ್ಳ ತುಂಬಿ ಹರಿಯುವುದರಿಂದ ಗ್ರಾಮಕ್ಕೆ ಹೋಗುವ ದಾರಿಯೇ ಮುಚ್ಚಿಹೋಗುತ್ತದೆ. ಹಳ್ಳಕ್ಕೆ ಗುಮ್ಮಿ ಹಾಕಿ ರಸ್ತೆ ಕಲ್ಪಿಸಬೇಕು ಎಂದು ಗ್ರಾಮಸ್ಥರು ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ಮತ್ತು ಸದಸ್ಯರಿಗೆ ಹಲವು ವರ್ಷಗಳಿಂದ ಮನವಿ ಮಾಡುತ್ತಿದ್ದರೂ, ಇದುವರೆಗೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ದೊಡ್ಡಿಯಿಂದ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಲೆಗೆ ಹೋಗುತ್ತಿದ್ದಾರೆ. ಆದರೆ ಮಳೆ ಬಂದಾಗ ಹಳ್ಳ ದಾಟಲಾಗದೆ ಹಲವಾರು ದಿನಗಳವರೆಗೆ ಶಾಲೆಗೆ ಹಾಜರಾಗದೇ ಮನೆಯಲ್ಲಿ ಉಳಿಯಬೇಕಾದ ಪರಿಸ್ಥಿತಿ ಉಂಟಾಗಿದೆ. ಇದರಿಂದ ಅವರ ಶಿಕ್ಷಣವೇ ಹಾಳಾಗುತ್ತಿದೆ.
ನಾವು ಇಲ್ಲಿಯ ತನಕ ಬಂದವರಿಗೆ ಮತ ಹಾಕುತ್ತಾ ಬಂದಿದೀವಿ. ದಾರಿ ಕೊಡಿ ಎಂದು ಕೇಳಿದರೂ ಯಾರೂ ಮಾಡಿ ಕೊಡಲಿಲ್ಲ. ಮುಂದೆ ಯಾವುದೇ ಚುನಾವಣೆ ಬರಲಿ, ನಾವು ಮತದಾನ ಮಾಡುವುದಿಲ್ಲ. ಬದಲಾಗಿ ಹೋರಾಟಕ್ಕೆ ಮುಂದಾಗುತ್ತೇವೆ.
-ಬೀರಪ್ಪ ಕುರುಬರ್, ಐದನಾಳರ್ ದೊಡ್ಡಿ (ಗುಂತಗೋಳ)
ಮಳೆ ಬಂದು ಹಳ್ಳ ತುಂಬಿದರೆ ನಮ್ಮ ಮಕ್ಕಳಿಗೆ ಶಾಲೆಗೆ ಹೋಗಲಾಗುವುದಿಲ್ಲ. ಪರೀಕ್ಷೆ ಇದ್ದರೂ ಮನೆಯಲ್ಲಿ ಕೂರಬೇಕಾಗುತ್ತದೆ. ನಾವು ಜೀವನ ಪೂರ್ತಿ ಗೋಳಾಟದಲ್ಲೇ ಕಳೆದಿದ್ದೇವೆ. ಮಕ್ಕಳನ್ನು ಓದಿಸಲು ಬಯಸುತ್ತೇವೆ. ನಮಗೆ ಕನಿಷ್ಠ ದಾರಿ ಸೌಲಭ್ಯ ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು.
-ಬಸಮ್ಮ, ಐದನಾಳರ್ ದೊಡ್ಡಿ (ಗುಂತಗೋಳ)







