ರಾಯಚೂರು | ಖಾಲಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಎಐಡಿವೈಒ ಸಂಘಟನೆಯಿಂದ ಸಹಿ ಸಂಗ್ರಹ

ರಾಯಚೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ಇಲಾಖೆಗಳಲ್ಲಿನ ಖಾಲಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ, ನೇಮಕಾತಿಯಲ್ಲಿನ ಭ್ರಷ್ಟಾಚಾರ ಮತ್ತು ಪರೀಕ್ಷಾ ಅಕ್ರಮಗಳ ವಿರುದ್ಧ ಇಂದು ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಒ) ಅಖಿಲ ಭಾರತ ಸಮಿತಿಯ ಕರೆಯ ಮೇರೆಗೆ ರಾಯಚೂರಿನ ತಹಶೀಲ್ ಕಚೇರಿ ಮುಂದೆ ಸಂಘಟನೆಯ ಸದಸ್ಯರು ಹಾಗೂ ಕಾರ್ಯಕರ್ತರು ಸಾರ್ವಜನಿಕರಿಂದ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ನಗರದ ತಹಶೀಲ್ ಕಚೇರಿ ಎದುರು ನಡೆದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಜಿಲ್ಲಾ ಅಧ್ಯಕ್ಷ ಚನ್ನಬಸವ ಜಾನೇಕಲ್ ಅವರು, ಎಐಡಿವೈಒ ಸಂಘಟನೆಯು ನಿರಂತರವಾಗಿ ನಿರುದ್ಯೋಗ ಸಮಸ್ಯೆ ವಿರುದ್ಧ ಹೋರಾಟಗಳನ್ನು ನಡೆಸುತ್ತಿದೆ. ಈಗ ಈ ಸಮಸ್ಯೆಯು ಅತ್ಯಂತ ಗಂಭೀರ ಹಂತ ತಲುಪಿದ್ದು, ಯುವಜನರು ದೇಶಾದ್ಯಂತ ನಿರುದ್ಯೋಗದಿಂದ ಕಂಗಾಲಾಗಿದ್ದಾರೆ. ಆದರೆ ಕೇಂದ್ರ ಅಥವಾ ರಾಜ್ಯ ಸರ್ಕಾರಗಳು ಈ ಕುರಿತು ಗಮನ ಹರಿಸದೇ, ಕಾರ್ಪೋರೇಟ್ ಪರ ನೀತಿಗಳನ್ನು ಜಾರಿಗೆ ತಂದು ಉದ್ಯೋಗ ಕಡಿತಕ್ಕೆ ಕಾರಣವಾಗಿವೆ ಎಂದರು.
ಕೇಂದ್ರದ ವಿವಿಧ ಇಲಾಖೆಗಳಲ್ಲೇ 9.79 ಲಕ್ಷ ಹುದ್ದೆಗಳು ಖಾಲಿ ಇವೆ ಎಂದು ಸರ್ಕಾರ ಹೇಳುತ್ತದೆ. ರೈಲ್ವೆ, ಬ್ಯಾಂಕು, ವಿಮಾನಯಾನ, ಎಲ್ಐಸಿ ಮುಂತಾದ ಕ್ಷೇತ್ರಗಳಲ್ಲಿ ಮಾತ್ರವೇ 30 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ ಎಂದು ಅವರು ವಿವರಿಸಿದರು.
ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ 2.85 ಲಕ್ಷ ಹುದ್ದೆಗಳು ಖಾಲಿ ಬಿದ್ದಿವೆ. ಕಲ್ಯಾಣ ಕರ್ನಾಟಕ ಪ್ರದೇಶದ ಶಿಕ್ಷಣ ಇಲಾಖೆಯಲ್ಲಿ ಮಾತ್ರವೇ 22 ಸಾವಿರ ಹುದ್ದೆಗಳು ಖಾಲಿ ಇವೆ. ರಾಯಚೂರು ಜಿಲ್ಲೆಯಲ್ಲೇ 5,000 ಶಿಕ್ಷಕರ ಹುದ್ದೆಗಳು ಖಾಲಿ ಇದ್ದು, ಶಿಕ್ಷಣದ ಗುಣಮಟ್ಟ ಕುಸಿದಿದೆ. ಆದ್ದರಿಂದ ಎಲ್ಲಾ ಶಿಕ್ಷಕರ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ, ಹಿರಿಯ ಕಲಾವಿದ ಎಚ್.ಎಚ್.ಮ್ಯಾದಾರ್, ನಿವೃತ್ತ ಬ್ಯಾಂಕ್ ಅಧಿಕಾರಿ ಅಂಬರೀಶ್ ಆದೋನಿ, ವೀರೇಶ್ ಬಾಬು ಮಹೇಂದ್ರ ಸಿಂಗ್, ರೈತ ಮುಖಂಡ ರಂಗನಾಥ್, ನಿವೃತ್ತ ಅಧಿಕಾರಿಗಳು ಎಸ್.ತಿಮ್ಮಾರೆಡ್ಡಿ ಮತ್ತು ಶಾಂತಗೌಡ ಸುಬೇದಾರ್ ಅವರು ಸಹಿ ಸಂಗ್ರಹ ಅಭಿಯಾನದಲ್ಲಿ ಪಾಲ್ಗೊಂಡು ಬೆಂಬಲ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯದರ್ಶಿ ವಿನೋದ್ ಕುಮಾರ್, ಸಂದೀಪ್, ಕೃಷ್ಣ ಮನಸಲಾಪುರ, ಅಭಿಲಾಶ್ ಅಲಬನೂರ್, ನೂರ್ ಪಾಶ, ಶಿವಪ್ಪ ಅಸ್ಕಿಹಾಳ್, ಮಾರೆಪ್ಪ ಮಮದಾಪುರ ಹಾಗೂ ಇತರರು ಭಾಗವಹಿಸಿದ್ದರು.







