ನಾಳೆಗೆ ಸಾವಿರ ದಿನ ಪೂರೈಸಲಿರುವ ರಾಯಚೂರು ಏಮ್ಸ್ ಹೋರಾಟ
ಕೇಂದ್ರ ಸರಕಾರದ ವಿರುದ್ಧ ಜನಾಕ್ರೋಶ

ರಾಯಚೂರು : ರಾಯಚೂರಿನಲ್ಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್ ) ಮಂಜೂರು ಮಾಡಲು ಒತ್ತಾಯಿಸಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಹೋರಾಟ ಸಾವಿರ ದಿನ ಪೂರೈಸಿದರೂ ಕೇಂದ್ರ ಸರಕಾರ ನಿರ್ಲಕ್ಷ್ಯ ವಹಿಸಿದ್ದು ಜಿಲ್ಲೆಯ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಹಿಂದುಳಿದ ಜಿಲ್ಲೆಯಾದ ರಾಯಚೂರಿಗೆ ಏಮ್ಸ್ ಮಂಜೂರು ಮಾಡುವಂತೆ ರಾಯಚೂರಿನ ಜಿಲ್ಲಾ ಮಹಾತ್ಮಾ ಗಾಂಧಿ ಕ್ರೀಡಾಂಗಣದ ಬಳಿ ಟೆಂಟ್ ಹಾಕಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಯುತ್ತಿದ್ದು, ಅದು ಫೆ. 5ರಂದು ಸಾವಿರ ದಿನ ಪೂರೈಸಲಿದೆ.
ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ)ಗಾಗಿ ಸುದೀರ್ಘವಾದ ಹೋರಾಟ ನಡೆದರೂ ರಾಜಕೀಯ ಕುತಂತ್ರದಿಂದ ಐಐಟಿ ವಂಚಿತವಾಗಿತ್ತು. ಇದರಿಂದ ಕೇಂದ್ರ ಸರಕಾರ ಸಮಾಧಾನಪಡಿಸಲು ಅಖಿಲ ಭಾರತ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿ) ನೀಡಿತ್ತು.
ಕೇಳಿದ್ದು ಐಐಟಿ, ನೀಡಿದ್ದು ಐಐಐಟಿ ಎಂದು ತೃಪ್ತಿಪಡದ ಇಲ್ಲಿನ ಪ್ರಗತಿಪರ ಹೋರಾಟಗಾರರು, ಕನ್ನಡಪರ ಹೋರಾಟಗಾರರು ಹಿರಿಯ ಹೋರಾಟಗಾರ ಬಸವರಾಜ ಕಳಸ ನೇತೃತ್ವದಲ್ಲಿ ರಾಯಚೂರು ಏಮ್ಸ್ ಹೋರಾಟ ಸಮಿತಿ ರಚನೆ ಮಾಡಿಕೊಂಡು ರಾಯಚೂರು ಬಂದ್, ಸರದಿ ಉಪವಾಸ ಸತ್ಯಾಗ್ರಹ, ರಕ್ತದಿಂದ ಸಹಿ ಸಂಗ್ರಹ ಸೇರಿ ವಿವಿಧ ಹಂತಗಳ ಹೋರಾಟ ಮಾಡಿ ಕೇಂದ್ರ ಸರಕಾರದ ಮೇಲೆ ನಿರಂತರ ಒತ್ತಡ ಹೇರುವ ಕೆಲಸ ಮಾಡಿದ್ದಾರೆ.
ಕಲ್ಯಾಣ ಕರ್ನಾಟಕಕ್ಕೆ ವಿಸ್ತರಿಸಿಕೊಂಡ ಹೋರಾಟ: ಜಿಲ್ಲೆಗೆ ಏಮ್ಸ್ ಮಂಜೂರು ಮಾಡಲು ಜಿಲ್ಲೆಯ ಗಡಿ ಮೀರಿ ಕಲ್ಯಾಣ ಕರ್ನಾಟಕಕ್ಕೆ ವಿಸ್ತರಿಸಿಕೊಂಡಿದ್ದು, ಹೋರಾಟ ಸಮಿತಿಯಿಂದ ಬೀದರ್, ಕಲಬುರಗಿ, ಕೊಪ್ಪಳ, ಯಾದಗಿರಿ, ಬಳ್ಳಾರಿ ಜಿಲ್ಲೆಗಳ ರಾಜಕೀಯ ನಾಯಕರ, ಪ್ರಗತಿಪರ ಸಂಘಟನೆಗಳ ಬೆಂಬಲ ಕೋರಿ ಹೋರಾಟ ಮುಂದುವರಿಸಿದ್ದು, ಅನೇಕ ಜಿಲ್ಲೆಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ರಾಜ್ಯದಿಂದ ಸ್ಪಂದನೆ, ಕೇಂದ್ರದಿಂದ ಅನ್ಯಾಯ: ವಿಧಾನಸಭಾ ಚುನಾವಣೆಯ ಮುಂಚೆ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ ಅವರು ಜಿಲ್ಲೆಗೆ ಭೇಟಿ ನೀಡಿ ಏಮ್ಸ್‌ಗೆ ಬೆಂಬಲ ನೀಡಿದ್ದರು. ಸಚಿವ, ಈ ಭಾಗದ ಹಿರಿಯ ನಾಯಕರಾಗಿರುವ ಎನ್‌ಎಸ್ ಬೋಸರಾಜು ಅವರು ಒತ್ತಡದ ಮೇರೆಗೆ ಚುನಾವಣಾ ಪ್ರಣಾಳಿಕೆಯಲ್ಲಿ 5 ಗ್ಯಾರಂಟಿಗಳ ಜೊತೆಗೆ ಏಮ್ಸ್ ಆರನೇ ಗ್ಯಾರಂಟಿಯಾಗಿ ಮಂಜೂರು ಮಾಡಿಸುತ್ತೇವೆ ಎಂದು ಭರವಸೆ ನೀಡಿದ್ದರು. ಕೊಟ್ಟ ಮಾತಿನಂತೆ ರಾಜ್ಯ ಸರಕಾರದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರಕಾರಕ್ಕೆ 5 ಬಾರಿ ಪತ್ರ ಬರೆದಿದ್ದಾರೆ. ಆದರೆ ಪ್ರಧಾನಮಂತ್ರಿ, ಗೃಹ ಮಂತ್ರಿ ಅಮಿತ್ ಷಾ ರಿಂದ ಯಾವುದೇ ಸಕಾರಾತ್ಮಕ ಸ್ಪಂದನೆ ಸಿಕ್ಕಿಲ್ಲ. ಇದು ಹೋರಾಟಗಾರ ಹಾಗೂ ಜಿಲ್ಲೆಯ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ದಿಲ್ಲಿಯ ಜಂತರ್ ನಲ್ಲಿ ಏಮ್ಸ್ ಕೂಗು: ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಕೇಂದ್ರಸಚಿವ ಪ್ರಹ್ಲಾದ್ ಜೋಶಿ, ಕೇಂದ್ರದ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ, ಶೋಭಾ ಕರಂದ್ಲಾಜೆ ಅವರಿಗೆ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರಿಗೂ ಮನವಿ ಸಲ್ಲಿಸಿ ಏಮ್ಸ್ ಬಗ್ಗೆ ಕೇಂದ್ರ ಸರಕಾರದ ಗಮನ ಸೆಳೆಯಲು ಪ್ರಯತ್ನಿಸಿದರೂ ಫಲ ನೀಡಿಲ್ಲ. ದೆಹಲಿಯ ಜಂತರ್ ಮಂತರ್ ನಲ್ಲಿ ಕಳೆದ ವರ್ಷ ಆಗಸ್ಟ್ 17 ರಂದು ಧರಣಿ ಸತ್ಯಾಗ್ರಹ ನಡೆಸಿ ಜಿಲ್ಲೆಯ ಕೂಗು ಕೆಂಪು ಕೋಟೆಗೆ ಕೇಳಿಸುವ ಪ್ರಯತ್ನವೂ ನಡೆಸಿದ್ದು ಐತಿಹಾಸಿಕ ಸಾಕ್ಷಿಯಾಗಿದೆ.
ನೈಸರ್ಗಿಕ ಸಂಪತ್ಭರಿತ ಜಿಲ್ಲೆಗೆ ಕಣ್ಣೊರೆಸುವ ತಂತ್ರ: ಶೈಕ್ಷಣಿಕವಾಗಿ, ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದ ರಾಯಚೂರು ಜಿಲ್ಲೆಯಲ್ಲಿ ಏಮ್ಸ್, ಐಐಟಿಯಂತಹ ದೊಡ್ಡ ಸಂಸ್ಥೆ ಸ್ಥಾಪಿಸಿದರೆ ಸಮಗ್ರ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಈ ಭಾಗದ ಜನರ ಆಶಯ. ಆದರೆ ಕೇಂದ್ರ ಸರ್ಕಾರ ಈ ಭಾಗದ ಜನರ ಕೂಗು ಕೇಳುತ್ತಿಲ್ಲ ಎನ್ನುವುದು ಏಮ್ಸ್ ಹೋರಾಟಗಾರರ ಆರೋಪ. ಜಿಲ್ಲೆಯಲ್ಲಿ ಕೃಷ್ಣಾ, ತುಂಗಭದ್ರಾ ನದಿ ಹರಿಯುತ್ತದೆ. ಹಟ್ಟಿ ಚಿನ್ನದ ಗಣಿ, ವಿದ್ಯುತ್ ಶಾಖೋತ್ಪನ್ನ ಕೇಂದ್ರ ಹಾಗೂ ಇತರ ನೈಸರ್ಗಿಕ ಸಂಪನ್ಮೂಲವಿದೆ. ಏಮ್ಸ್ ಸ್ಥಾಪಿಸಿದರೆ ಇಲ್ಲಿನ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆಯೂ ದೊರೆಯಲಿದೆ ಎನ್ನುವ ಆಸೆಗೆ ಕೇಂದ್ರ ಸರಕಾರ ತಣ್ಣೀರು ಎರಚಿದೆ. ಹೀಗಾಗಿ ಈಗ ಏಮ್ಸ್ ಹೋರಾಟ ಸಮಿತಿ ದೊಡ್ಡ ಮಟ್ಟದ ಹೋರಾಟಕ್ಕೆ ಸಜ್ಜಾಗಿದೆ.
ಬಿಜೆಪಿ ನಾಯಕರಿಗೆ ಈಗಲೂ ಕಾಲ ಮಿಂಚಿಲ್ಲ ಶಾಸಕ ಡಾ.ಶಿವರಾಜ ಪಾಟೀಲ, ವಿಜಯೇಂದ್ರ ನಮ್ಮ ಹೋರಾಟಕ್ಕೆ ಬೆಂಬಲಿಸಿ ಪ್ರಧಾನ ಮಂತ್ರಿ ಮೋದಿಯ ಬಳಿ ನಿಯೋಗ ಕರೆದುಕೊಂಡು ಹೋಗಿ ಬದ್ಧತೆ ಪ್ರದರ್ಶಿಸಲಿ. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು.
- ಅಶೋಕ ಕುಮಾರ್ ಜೈನ್, ರಾಯಚೂರು ಏಮ್ಸ್ ಹೋರಾಟದ ಸಹ ಸಂಚಾಲಕ
ರಾಯಚೂರು ಜಿಲ್ಲೆಗೆ ರಾಷ್ಟ್ರೀಯ ಆರೋಗ್ಯ ಯೋಜನೆಯಡಿಯಲ್ಲಿ ಆರೋಗ್ಯ ಸೇವೆಗಳನ್ನು ಮೇಲ್ದರ್ಜೆಗೇರಿಸಿ ವಿಶೇಷ ಸ್ಥಾನಮಾನ ನೀಡಲಾಗುವುದು ಎಂದು ಇತ್ತೀಚೆಗೆ ಕೇಂದ್ರ ಸಚಿವ ಜೆ.ಪಿ ನಡ್ಡ ಅವರು ಮುಖ್ಯಮಂತ್ರಿ ಯವರ ಪತ್ರಕ್ಕೆ ಉತ್ತರಿಸಿದ್ದು, ಇದು ಕಣ್ಣೊರೆಸುವ ತಂತ್ರವಾಗಿದೆ. ಫೆ.5ರಂದು ದೊಡ್ಡ ಮಟ್ಟದ ಹೋರಾಟಕ್ಕೆ ಸಜ್ಜಾಗಿದ್ದು, ಕಲ್ಯಾಣ ಕರ್ನಾಟಕದ ಅನೇಕ ನಾಯಕರು ಪಕ್ಷಾತೀತವಾಗಿ ಬೆಂಬಲ ನೀಡಲಿದ್ದಾರೆ.
- ಬಸವರಾಜ ಕಳಸ, ಪ್ರಧಾನ ಸಂಚಾಲಕ ರಾಯಚೂರು ಏಮ್ಸ್ ಹೋರಾಟ ಸಮಿತಿ.