ರಾಯಚೂರು ವಿಮಾನ ನಿಲ್ದಾಣ | 15 ದಿನಗಳಲ್ಲಿ ಸಂಪೂರ್ಣ ಭೂ ಸ್ವಾಧೀನ ಪ್ರಕ್ರಿಯೆ ಮುಗಿಸಿ : ಸಚಿವ ಎನ್ಎಸ್ ಭೋಸರಾಜು
►ಸಚಿವ ಎಂ ಬಿ ಪಾಟೀಲ್, ಎನ್ಎಸ್ ಬೋಸರಾಜು, ಶರಣಪ್ರಕಾಶ್ ಪಾಟೀಲ್ ಜಂಟಿ ಪ್ರಗತಿ ಪರಿಶೀಲನಾ ಸಭೆ ►ವಿಮಾನ ನಿಲ್ದಾಣ ಕಾಮಗಾರಿ ತ್ವರಿತಗೊಳಿಸಲು ಅಧಿಕಾರಿಗಳಿಗೆ ಸೂಚನೆ

ರಾಯಚೂರು: ರಾಯಚೂರು ವಿಮಾನ ನಿಲ್ದಾಣಕ್ಕೆ ಕಾಯ್ದಿರಿಸಿದ 25 ಎಕರೆ ಭೂಮಿ ಸ್ವಾಧೀನ ಪಡೆಸಿಕೊಳ್ಳಲು 20 ಕೋಟಿ ಹಣ ಮಂಜೂರು ಮಾಡಲಾಗಿದೆ. ಭೂ ಸ್ವಾಧೀನ ಪ್ರಕ್ರಿಯೆ ಅಂತಿಮ ಅಧಿಸೂಚನೆ ಹೊರಡಿಸಲಾಗಿದ್ದು. ಇನ್ನು 15 ದಿನಗಳೊಳಗಾಗಿ ಸಂಪೂರ್ಣ ಭೂ-ಸ್ವಾಧೀನಮಾಡಿಕೊಂದು ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪ್ರಾರಂಭಿಸಬೇಕೆಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಎಂ ಬಿ ಪಾಟೀಲ್, ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಶರಣ ಪ್ರಕಾಶ ಪಾಟೀಲ್ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವರಾದ ಎನ್ ಎಸ್ ಬೋಸರಾಜು ಅವರು ಅಧಿಕಾರಿಗಳಿಗೆ ಸೂಚಿಸಿದರು.
ರಾಯಚೂರು ವಿಮಾನ ನಿಲ್ದಾಣ ಸ್ಥಾಪನೆ ಕುರಿತು ವಿಧಾನಸೌಧದಲ್ಲಿ ಸಚಿವ ಎಂ ಬಿ ಪಾಟೀಲ್ ಅವರ ಅದ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೀರಾವರಿ ಸಚಿವ ಎನ್ಎಸ್ ಬೋಸರಾಜು, ಶರಣಪ್ರಕಾಶ್ ಪಾಟೀಲ್ ಅವರು ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳೊಂದಿಗೆ ಕಾಮಗಾರಿ ಪ್ರಗತಿ ಬಗ್ಗೆ ಕೂಲಂಕುಶವಾಗಿ ಚರ್ಚಿಸಿದರು.
ರಾಯಚೂರು ವಿಮಾನ ನಿಲ್ದಾಣ ಕಾಮಗಾರಿಗೆ ಕೇಂದ್ರ ಸರ್ಕಾರ ಈಗಾಗಲೆ ಸೈಟ್ ಕ್ಲೀಯರೆನ್ಸ್ ನೀಡಿದೆ. ಸದರಿ ಲ್ಯಾಂಡ್ ಕ್ಲೀಯರೆನ್ಸ್ ಆದ ಸ್ಥಳಕ್ಕೆಲ್ಲ ಕಾಂಪೌಂಡ ಗೋಡೆ ನಿರ್ಮಿಸಿ ಕಾಮಗಾರಿ ತ್ವರಿತಗತಿಯಲ್ಲಿ ಕೈಗೆತ್ತಿಕೊಳ್ಳುಬೇಕು. ಮಾರ್ಜ್ ಅಂತ್ಯದೊಳಗೆ ಕೇಂದ್ರ ಪರಿಸರ ಇಲಾಖೆ ಅನುಮತಿ ಪಡೆಯಲು ಪತ್ರ ಬರೆಯಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು.
ವಿಮಾನ ನಿಲ್ದಾಣಕ್ಕೆ ಕಾಯ್ದಿರಿಸಿದ ಭೂಮಿಯಲಗಲಿ ಅನಧಿಕೃತವಾಗಿ ವಾಸವಿರುವ ಕುಟುಂಬಗಳಿಗೆ ಪರ್ಯಾಯ ವ್ಯವಸ್ತೆ ಕಲ್ಪಿಸಿ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ಕೈಗಾರಿಕೆಗಳ ಸ್ಥಾಪನೆಗಾಗಿ ಗದ್ವಾಲ್ ರಸ್ತೆಯಲ್ಲಿ 685 ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲು ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದ್ದು, ಶೀಘ್ರವೇ ಅಂತಿಮ ಅಧಿಸೂಚನೆ ಹೊರಡಿಸುವಂತೆ ಕೆಐಡಿಬಿ ಅಧಿಕಾರಿಗಳಿಗೆ ಸಚಿವರುಗಳು ಸೂಚನೆ ನೀಡಿದರು. ಅಲ್ಲದೆ ಹೆಚ್ಚುವರಿಯಾಗಿ ಮೆಗಾ ಟೆಕ್ಸ್‌ಟೈಲ್ ಪಾರ್ಕ್ ಸ್ಥಾಪನೆಗಾಗಿ 1 ಸಾವಿರ ಎಕರೆ ಭೂಮಿ ಗುರುತಿಸಿ ಪ್ರಾಥಮಿಕ ಅಧಿಸೂಚನೆ ಹೊರಡಿಸಲು ತಿಳಿಸಿದರು.
ಈಗಾಗಲೆ ಕೆಐಎಡಿಬಿ ನಿವೇಶನದಲ್ಲಿ ದಶಕದ ಹಿಂದೆಯೇ ನಿರ್ಮಿಸಲಾದ ನಿವೇಶನ ಹಾಗೂ ಮನೆಗಳು ಮಾರಾಟವಾಗದ ಖಾಲಿ ಬಿದ್ದಿವೆ ಕಾರಣ ಸದರಿ ಮನೆಗಳನ್ನು ವಿಲೆವಾರಿಗಾಗಿ ಅಗತ್ಯ ಕ್ರಮದ ಕುರಿತು ಚರ್ಚಿಸಿದರು.
ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಮಂಜುಳಾ, ರಾಯಚೂರು ಜಿಲ್ಲಾಧಿಕಾರಿ ನಿತೀಶ್ ಕುಮಾರ್, ಮೂಲಭೂತ ಸೌಕರ್ಯ ಇಲಾಖೆ ವ್ಯವಸ್ಥಾಪಕ ನಿರ್ದೇಶಕ ರಾದ ಖುಷ್ಬೂ ಚೌಧರಿ, ಕೆಐಎಡಿಬಿಯ ಅಧಿಕಾರಿಗಳು ಉಪಸ್ಥಿತರಿದ್ದರು.







