ಎಸ್ ಟಿ ಸಮುದಾಯದ ಚಾಲಕನಿಗೆ ಜಾತಿ ನಿಂದನೆ ಆರೋಪ; ಎಇಇ ವಿರುದ್ದ ದೂರು

ಹೀರಾಲಾಲ್ | ಶಂಕರ ನಾಯಕ
ರಾಯಚೂರು: ಪರಿಶಿಷ್ಟ ಪಂಗಡದ ಹೊರ ಗುತ್ತಿಗೆ ನೌಕರ( ಕಾರು ಚಾಲಕ) ನಿಗೆ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಯ ದೇವದುರ್ಗ ಉಪ ವಿಭಾಗದ ಎಇಇ ಜಾತಿ ನಿಂದನೆ ಮಾಡಿ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಿರುವ ಬಗ್ಗೆ ವರದಿಯಾಗಿದೆ.
ಎಇಇ ಹೀರಾಲಾಲ್ ಅವರ ವಿರುದ್ಧ ಕಾರು ಚಾಲಕರಾಗಿರುವ ಶಂಕರ ನಾಯಕ ಅವರು ದೂರು ನೀಡಿದ್ದಾರೆ ಎನ್ನಲಾಗಿದೆ. ನವೆಂಬರ್ 1 ಕನ್ನಡ ರಾಜ್ಯೋತ್ಸವದ ದಿನದಂದು ಧ್ವಜಾರೋಹಣದ ವೇಳೆ 10 ನಿಮಿಷ ತಡವಾಗಿ ಬಂದಿದ್ದಾರೆ ಎಂದು ಆಕ್ರೋಶಗೊಂಡು ಜಾತಿ ನಿಂದನೆ ಮಾಡಿ ಬೆದರಿಕೆ ಹಾಕಿದ್ದಾರೆ ಎಂದು ಚಾಲಕ ದೂರಿನಲ್ಲಿ ಆರೋಪಿಸಿದ್ದಾರೆ.
ಕಳೆದ 5 ವರ್ಷಗಳಿಂದ ಶಂಕರ್ ನಾಯಕ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಯ ದೇವದುರ್ಗ ಉಪ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದು, ಕನ್ನಡ ರಾಜ್ಯೋತ್ಸವದ ದಿನ ಧ್ವಜಾರೋಹಣ ಕಾರ್ಯಕ್ರಮ ಇರುವುದರಿಂದ ಎಇಇ ಬೆಳಿಗ್ಗೆ 8 ಗಂಟೆಗೆ ಮನೆ ಕಡೆಗೆ ಬರಲು ಹೇಳಿದ್ದಾರೆ. 7 ಗಂಟೆಗೆ ಎಂದು ಚಾಲಕ ಹೇಳಿದಾಗ ನಾನು ಹೇಳಿದಷ್ಟು ಮಾಡು ಎಂದು 8ಗಂಟೆಗೆ ಕ್ಕೆ ಬರಲು ಹೇಳಿದ್ದಾರೆ. ಆದರೆ ಚಾಲಕ 10 ನಿಮಿಷ ತಡವಾಗಿ ಬಂದಿದ್ದಕ್ಕಾಗಿ ಅವಾಚ್ಯವಾಗಿ ಮಾತನಾಡಿ, ಜಾತಿನಿಂದನೆ ಮಾಡಿದಲ್ಲದೇ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಅಟ್ರಾಸಿಟಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು, ಬೆದರಿಕೆ ಹಾಕಿದ್ದು ಅವರ ಮನೆಯೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಅದನ್ನು ಸಾಕ್ಷಿಯಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಆಗ್ರಹಿಸಿದ್ದಾರೆ.






