Raichur | ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪ: ಮಡಿವಾಳ ನಿಗಮದ ಅಧ್ಯಕ್ಷರ ಹುಟ್ಟುಹಬ್ಬದ ಕಾರ್ಯಕ್ರಮ ರದ್ದುಗೊಳಿಸಲು ಆಗ್ರಹ

ರಾಯಚೂರು: ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವಾಗ, ಅನಧಿಕೃತ ಮಡಿವಾಳ ಸಂಘದೊಂದಿಗೆ ಮಡಿವಾಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಿ. ನಂಜಪ್ಪ ಅವರು ತಮ್ಮ 65ನೇ ಹುಟ್ಟುಹಬ್ಬದ ಅಂಗವಾಗಿ ಆ. 15ರಂದು ಇಸ್ತ್ರಿ ಪೆಟ್ಟಿಗೆ, ಕುಕ್ಕರ್, ಬೆಡ್ಶೀಟ್ ಹಾಗೂ ನೋಟ್ಬುಕ್ಗಳನ್ನು ವಿತರಿಸುವ ಕಾರ್ಯಕ್ರಮ ಆಯೋಜಿಸಿರುವುದು ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ. ಆದ್ದರಿಂದ ಜಿಲ್ಲಾಧಿಕಾರಿಗಳು ಕೂಡಲೇ ಕಾರ್ಯಕ್ರಮವನ್ನು ರದ್ದುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಮಡಿವಾಳ ಸಮಾಜದ ಅಧ್ಯಕ್ಷ ಜಂಬಣ್ಣ ಯಕ್ಲಾಸಪುರು ಒತ್ತಾಯಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೈಲಾ ನಿಯಮಗಳನ್ನು ಉಲ್ಲಂಘಿಸಿ ಜಿಲ್ಲಾ ಮಡಿವಾಳ ಸಮಾಜದ ಅಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ ಎಂಬ ಕುರಿತು ಸಹಕಾರ ಸಂಘಗಳ ಉಪನಿಬಂಧಕರಿಗೆ ದೂರು ಸಲ್ಲಿಸಲಾಗಿದೆ. ಈ ದೂರು ವಿಚಾರಣೆಯ ಹಂತದಲ್ಲಿರುವಾಗಲೇ ಮಡಿವಾಳ ಸಮಾಜದ ರಾಜ್ಯಾಧ್ಯಕ್ಷರು ಆಗಮಿಸಿ, ಅನಧಿಕೃತ ಸಂಘವನ್ನು ನಿಯಮಾನುಸಾರ ರಚಿಸಲಾಗಿದೆ ಎಂದು ಹೇಳಿರುವುದು ಖಂಡನೀಯವಾಗಿದೆ ಎಂದರು.
ಸಹಕಾರ ಸಂಘಗಳ ನಿಯಮಗಳ ಅನ್ವಯ ಆಯ್ಕೆ ಪ್ರಕ್ರಿಯೆ ನಡೆಯಬೇಕಿತ್ತು. ಆದರೆ, ಹಾಲಿ ಅಧ್ಯಕ್ಷರ ಗೈರುಹಾಜರಿಯಲ್ಲಿ ತಾವೇ ಆಯ್ಕೆಯನ್ನು ಘೋಷಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.
ಪ್ರಸ್ತುತ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವಾಗ ಹುಟ್ಟುಹಬ್ಬದ ಆಚರಣೆಯ ಹೆಸರಿನಲ್ಲಿ ಉಡುಗೊರೆಗಳನ್ನು ವಿತರಿಸುವ ಕಾರ್ಯಕ್ರಮ ಆಯೋಜಿಸುವ ಮೂಲಕ ನಿಗಮದ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳಲು ಮುಂದಾಗಿರುವುದು ಮಡಿವಾಳ ಸಮಾಜಕ್ಕೆ ಅಪವಾದ ತರುವಂತಾಗಿದೆ ಎಂದು ಜಂಬಣ್ಣ ಯಕ್ಲಾಸಪುರು ದೂರಿದರು. ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿಗಳು ಕೂಡಲೇ ಮಧ್ಯಪ್ರವೇಶಿಸಿ ಕಾರ್ಯಕ್ರಮವನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಹಿಳಾ ಮುಖಂಡೆ ಮಂಜುಳಾ ಅಮರೇಶ, ಮುನಿಸ್ವಾಮಿ, ಲಕ್ಷ್ಮಣ, ವೀರೇಶ ಭೂತಪ್ಪ, ಹುಲಿಗೆಪ್ಪ ಹಾಗೂ ಶಾಂತಕುಮಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.






