Raichur | ತೆರಿಗೆ ವಸೂಲಾತಿಯಲ್ಲಿ ನಿರ್ಲಕ್ಷ್ಯ ಆರೋಪ : ಇಬ್ಬರು ಪಿಡಿಓ ಅಮಾನತು
ಮೂವರು ಕರವಸೂಲಿಗಾರರ ವಿರುದ್ಧ ಶಿಸ್ತು ಕ್ರಮ

ರಾಯಚೂರು : ತೆರಿಗೆ ವಸೂಲಾತಿಯಲ್ಲಿ ನಿರ್ಲಕ್ಷ್ಯ ಹಾಗೂ ಕರ್ತವ್ಯ ಲೋಪ ಎಸಗಿರುವುದು ಕಂಡುಬಂದ ಹಿನ್ನೆಲೆಯಲ್ಲಿ ದೇವದುರ್ಗ ತಾಲೂಕಿನ ಶಾವಂತಗೇರಾ ಹಾಗೂ ಮಾನ್ವಿ ತಾಲೂಕಿನ ಸಾದಾಪುರ ಗ್ರಾಮ ಪಂಚಾಯಿತಿಗಳ ಇಬ್ಬರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು (ಪಿಡಿಓ) ಸೇವೆಯಿಂದ ಅಮಾನತುಗೊಳಿಸಲಾಗಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಕರವಸೂಲಿಗಾರರ ಸಿಬ್ಬಂದಿಯ ಅನುಮೋದನೆಯನ್ನು ರದ್ದುಗೊಳಿಸಿ, ಸೇವೆಯಿಂದ ವಜಾಗೊಳಿಸುವ ಕುರಿತು ಇಲಾಖಾ ವಿಚಾರಣೆ ನಡೆಸಲು ಆದೇಶಿಸಲಾಗಿದೆ.
ಈ ಕುರಿತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ್ ಕುಮಾರ್ ಕಾಂದೂ ಆದೇಶ ಹೊರಡಿಸಿದ್ದು, ಸಂಬಂಧಿಸಿದ ಗ್ರಾಮ ಪಂಚಾಯಿತಿಗಳಿಗೆ ನಿಯಮಾನುಸಾರ ಶಿಸ್ತು ಕ್ರಮ ಜರುಗಿಸುವಂತೆ ಸೂಚನೆ ನೀಡಿದ್ದಾರೆ.
ಅಮಾನತುಗೊಂಡವರಲ್ಲಿ ದೇವದುರ್ಗ ತಾಲೂಕಿನ ಶಾವಂತಗೇರಾ ಗ್ರಾಮ ಪಂಚಾಯಿತಿಯ ಪ್ರಭಾರಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತೀನುದ್ದೀನ್ ಹಾಗೂ ಮಾನ್ವಿ ತಾಲೂಕಿನ ಸಾದಾಪುರ ಗ್ರಾಮ ಪಂಚಾಯಿತಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಭುಕುಮಾರ್ ಸೇರಿದ್ದಾರೆ. ಜೊತೆಗೆ ಶಾವಂತಗೇರಾ ಗ್ರಾಮದ ಕರವಸೂಲಿಗಾರ ರಾಜಶೇಖರ ಹಾಗೂ ಸಾದಾಪುರ ಗ್ರಾಮದ ಕರವಸೂಲಿಗಾರರಾದ ಹೇಮಣ್ಣ ಮತ್ತು ಹನುಮಂತರಾಯ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ.
ಅಧಿಕೃತ ಮಾಹಿತಿಯ ಪ್ರಕಾರ, ಸಾದಾಪುರ ಗ್ರಾಮ ಪಂಚಾಯಿತಿಯ ಒಟ್ಟು ತೆರಿಗೆ ಬೇಡಿಕೆ 31,89,780.68 ರೂ. ಇದ್ದು, ಇದರಲ್ಲಿ ಕೇವಲ 55,246.67 ರೂ. ಮಾತ್ರ ವಸೂಲಿಯಾಗಿದೆ. ಅದೇ ರೀತಿ, ಶಾವಂತಗೇರಾ ಗ್ರಾಮ ಪಂಚಾಯಿತಿಯಲ್ಲಿ 28,78,086.78 ರೂ. ತೆರಿಗೆ ಬೇಡಿಕೆ ಇದ್ದರೂ, 1,56,328 ರೂ. ಮಾತ್ರ ವಸೂಲಿಯಾಗಿದೆ.
ಜಿಲ್ಲೆಯಲ್ಲೇ ಈ ಎರಡೂ ಗ್ರಾಮ ಪಂಚಾಯಿತಿಗಳ ತೆರಿಗೆ ವಸೂಲಾತಿ ಪ್ರಗತಿ ಅತ್ಯಂತ ಕಡಿಮೆ ಮಟ್ಟದಲ್ಲಿರುವುದು ಪರಿಶೀಲನೆಯಲ್ಲಿ ಬೆಳಕಿಗೆ ಬಂದಿದೆ. ತೆರಿಗೆ ವಸೂಲಾತಿ ಹೆಚ್ಚಿಸಲು ಹಲವು ಬಾರಿ ಸೂಚನೆ ನೀಡಿದ್ದರೂ ಅಧಿಕಾರಿಗಳು ಮತ್ತು ಸಿಬ್ಬಂದಿ ನಿರೀಕ್ಷಿತ ಮಟ್ಟದಲ್ಲಿ ಕಾರ್ಯನಿರ್ವಹಿಸಿಲ್ಲ ಹಾಗೂ ಮೇಲಾಧಿಕಾರಿಗಳ ನಿರ್ದೇಶನಗಳನ್ನು ಪಾಲಿಸುವಲ್ಲಿ ನಿರ್ಲಕ್ಷ್ಯ ತೋರಿದ್ದಾರೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಕರ್ನಾಟಕ ನಾಗರಿಕ ಸೇವಾ (ನಡತೆ) ನಿಯಮಗಳು, 2021ರ ನಿಯಮ 3ರ ಅನ್ವಯ ಇಬ್ಬರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.
ಅದೇ ವೇಳೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಗ್ರಾಮ ಪಂಚಾಯಿತಿ ಸಿಬ್ಬಂದಿಯ ಸ್ವರೂಪ, ವೇತನ, ಶ್ರೇಣಿಗಳು, ನೇಮಕಾತಿ ವಿಧಾನ ಮತ್ತು ಇತರೆ ಸೇವಾ ಷರತ್ತುಗಳು) ನಿಯಮಗಳು, 2020ರ ನಿಯಮ 8ರ ಅನ್ವಯ ಮೂವರು ಕರವಸೂಲಿಗಾರರ ಸಿಬ್ಬಂದಿಯ ಅನುಮೋದನೆಯನ್ನು ರದ್ದುಗೊಳಿಸಿ, ಸೇವೆಯಿಂದ ವಜಾಗೊಳಿಸುವ ಸಂಬಂಧ ಇಲಾಖಾ ವಿಚಾರಣೆ ನಡೆಸಲು ಆದೇಶಿಸಲಾಗಿದೆ.






