Raichur | ಕಳಪೆ ಆಹಾರ ಪೂರೈಕೆ ಆರೋಪ : ವಸತಿನಿಲಯಗಳಲ್ಲಿ ನಿರ್ಮಲ ನಿಲಯ ಅಭಿಯಾನಕ್ಕೆ ಜಿಪಂ ಆದೇಶ
ವಾರ್ತಾಭಾರತಿ ವರದಿ ಫಲಶ್ರುತಿ

ರಾಯಚೂರು: ಜಿಲ್ಲೆಯ ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳು ಕಳಪೆ ಆಹಾರ ಸೇವಿಸಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗುತ್ತಿರುವ ಘಟನೆಗಳಿಂದ ಕೊನೆಗೂ ಜಿಪಂ ಎಚ್ಚೆತ್ತುಕೊಂಡು ನೋಡಲ್ ಅಧಿಕಾರಿಗಳನ್ನು ನೇಮಕ ಮಾಡುವ ಜತೆಗೆ ಸ್ವಚ್ಛ ಹಾಗೂ ಶುದ್ಧ ಆಹಾರ ತಯಾರಿಸಲು ನಿರ್ಮಲ ನಿಲಯ ಅಭಿಯಾನ ನಡೆಸುವುದಾಗಿ ತಿಳಿಸಿದೆ.
ವಸತಿ ನಿಲಯಗಳಲ್ಲಿ ಕಳಪೆಮಟ್ಟದ, ಶುಚಿ ಹಾಗೂ ರುಚಿಯಲ್ಲದ ಆಹಾರ ತಯಾರಿಸಲಾಗುತ್ತಿದೆ ಎಂಬ ವಿದ್ಯಾರ್ಥಿಗಳ ಆರೋಪದ ಮೇರೆಗೆ ಹಾಗೂ ಮೇಲಿಂದ ಮೇಲೆ ಮಕ್ಕಳು ಅಸ್ವಸ್ಥರಾಗುತ್ತಿರುವ ಕುರಿತು ವಾರ್ತಾಭಾರತಿ ಪತ್ರಿಕೆಯಲ್ಲಿ ಸೆ.6ರಂದು 33 ದಿನಗಳಲ್ಲಿ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ ಶೀರ್ಷಿಕೆಯಡಿ ವರದಿ ಪ್ರಕಟಿಸಲಾಗಿತ್ತು.
ವರದಿಗೆ ಎಚ್ಚೆತ್ತು ನಿರ್ಮಲ ನಿಲಯ ಅಭಿಯಾನ :
ವರದಿಯ ಪರಿಣಾಮವಾಗಿ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ್ ಕುಮಾರ ಕಾಂದೂ ಅವರು ಸೆ.11 ರಂದು ಆದೇಶ ಹೊರಡಿಸಿ ಜಿಲ್ಲೆಯ ಸಮಾಜ ಕಲ್ಯಾಣ, ಪರಿಶಿಷ್ಟ ವರ್ಗಗಳ ಕಲ್ಯಾಣ, ಹಿಂದುಳಿದ ವರ್ಗಗಳ ಮತ್ತು ಅಲ್ಪ ಸಂಖ್ಯಾತರ ಇಲಾಖೆಗಳು ಹಾಗೂ ಶಿಕ್ಷಣ ಇಲಾಖೆಯಿಂದ ನಡೆಯುತ್ತಿರುವ ವಸತಿ ನಿಲಯ, ವಸತಿ ಶಾಲೆ, ಆಶ್ರಮ ಶಾಲೆಗಳಲ್ಲಿ ಸ್ವಚ್ಛತೆ ಹಾಗೂ ನಿಲಯಾರ್ಥಿಗಳಿಗೆ ಶುಚಿ ಹಾಗೂ ರುಚಿಕರ ಆಹಾರ ಪೂರೈಸಲು ಸೆ.15 ರಿಂದ 30ರವರೆಗೆ ನಿರ್ಮಲ ನಿಲಯ ಅಭಿಯಾನ ಹಮ್ಮಿಕೊಳ್ಳಬೇಕೆಂದು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ನೋಡಲ್ ಅಧಿಕಾರಿಗಳ ನೇಮಕ:
ನಿರ್ಮಲ ನಿಲಯ ಅಭಿಯಾನ ಆದೇಶದಲ್ಲಿ ನೇಮಿಸಲಾದ ನೋಡಲ್ ಅಧಿಕಾರಿಗಳು ತಮಗೆ ಸೂಚಿಸಿದ ಆಯಾ ದಿನದಂದು ವಸತಿನಿಲಯ, ಶಾಲೆಗಳಿಗೆ ಅಭಿಯಾನದ ಅವಧಿಯಲ್ಲಿ ಬೆಳಗಿನ ಉಪಹಾರ, ಮಧ್ಯಾಹ್ನ ಹಾಗೂ ರಾತ್ರಿ ಊಟದ ವೇಳೆಯಲ್ಲಿ ಕಡ್ಡಾಯವಾಗಿ ಭೇಟಿ ನೀಡಿ ಅಡುಗೆ ಕೋಣೆ, ದಾಸ್ತಾನು ಕೊಠಡಿ ಹಾಗೂ ಆಹಾರದ ಗುಣಮಟ್ಟ ಕುರಿತು ಪರಿವೀಕ್ಷಣೆ ನಡೆಸಬೇಕು. ಅಲ್ಲದೆ ಅಭಿಯಾನದಡಿ ಕಾರ್ಯಕ್ರಮ ಮಾಡಿದ ಮಾಹಿತಿಯ ವರದಿಯನ್ನು ಅ.1ರಂದು ಖುದ್ದಾಗಿ ಜಿಲ್ಲಾಧಿಕಾರಿ ಹಾಗೂ ತಮಗೆ ಸಲ್ಲಿಸಲು ನಿರ್ದೇಶನ ನೀಡಿದ್ದಾರೆ.






