ರಾಯಚೂರು | ಗಬ್ಬೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಂಬುಲೆನ್ಸ್ ಸೇವೆ ಸ್ಥಗಿತ : ರೋಗಿಗಳ ಪರದಾಟ

ರಾಯಚೂರು : ದೇವದುರ್ಗ ತಾಲೂಕಿನ ಗಬ್ಬೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 108 ತುರ್ತು ಸೇವೆ ಸ್ಥಗಿತಗೊಂಡು ತಿಂಗಳುಗಳು ಕಳೆದರೂ ಯಾವುದೇ ವ್ಯವಸ್ಥೆ ಮಾಡುವಲ್ಲಿ ಆರೋಗ್ಯ ಇಲಾಖೆ ವಿಫಲವಾಗಿದೆ. ವೈದ್ಯರು, ಸಿಬ್ಬಂದಿ, ಔಷಧಿ ಕೊರತೆಗಳ ಮಧ್ಯೆ ವಾಹನ ವ್ಯವಸ್ಥೆ ಜನರಿಗೆ ದೊರೆಯದೆ ಹೋಗಿದೆ ಎಂದು ಮಾದಿಗ ಮೀಸಲಾತಿ ಹೋರಾಟ ಸಮಿತಿ ಮುಖಂಡ ರಾಜಪ್ಪ ಸಿರವಾರಕರ್ ಆರೋಪಿಸಿದರು.
ಮಾಧ್ಯಮಗೋಷ್ಠಿಯನ್ನುದ್ದೇಶೀಸಿ ಮಾತನಾಡಿದ ರಾಜಪ್ಪ ಸಿರವಾರಕರ್, ಸರಿ ಸುಮಾರು 50 ಹಳ್ಳಿಗಳು ಗಬ್ಬೂರ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಸೇರಿವೆ. ರಾಯಚೂರು ತಾಲೂಕಿನ 10 ಹಳ್ಳಿಗಳ ಜನರು ಕೂಡ ಗಬ್ಬೂರು ಆರೋಗ್ಯ ಕೇಂದ್ರದಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ತುರ್ತು ಸಂದರ್ಭದಲ್ಲಿ ಅಂಬುಲೆನ್ಸ್ ವ್ಯವಸ್ಥೆ ಇಲ್ಲದೆ ಹೋಗಿದೆ. ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಅನೇಕ ಬಾರಿ ಮನವಿ ನೀಡಿದ್ದರೂ ಸ್ಪಂದಿಸಿಲ್ಲ. ಕೂಡಲೇ ಜಿಲ್ಲಾಧಿಕಾರಿಗಳು ಅಂಬುಲೆನ್ಸ್ ಸೇವೆ ಒದಗಿಸಲು ಸೂಚಿಸಬೇಕು. ಇಲ್ಲದೇ ಹೋದಲ್ಲಿ ಡಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಶಾಂತಕುಮಾರ್ ಹೊನ್ನಟಗಿ, ಶರಣಪ್ಪ ಗೂಗಲ್, ಮುತ್ತುರಾಜ ಮ್ಯಾತಿ, ಬಸಲಿಂಗಪ್ಪ ಖಾನಾಪುರು, ಯೇಸು ಗಬ್ಬೂರು, ಮಲ್ಲಯ್ಯ ಖಾನಾಪುರು ಉಪಸ್ಥಿತರಿದ್ದರು.





