Raichur | ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರ ಅಧಿಕಾರಾವಧಿ 3 ವರ್ಷಕ್ಕೆ ಇಳಿಸಲು ಅಣ್ಣಪ್ಪ ಮೇಟಿಗೌಡ ಆಗ್ರಹ

ರಾಯಚೂರು: ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರು ಹಾಗೂ ಜಿಲ್ಲಾಧ್ಯಕ್ಷರ ಪ್ರಸ್ತುತ ಐದು ವರ್ಷಗಳ ಅಧಿಕಾರಾವಧಿಯನ್ನು ಮತ್ತೆ ಮೂರು ವರ್ಷಕ್ಕೆ ಇಳಿಸಿ, ಬೈಲಾ ತಿದ್ದುಪಡಿ ಮಾಡಬೇಕು ಎಂದು ಬೆಳಕು ಸಂಸ್ಥೆಯ ಅಧ್ಯಕ್ಷ ಅಣ್ಣಪ್ಪ ಮೇಟಿಗೌಡ ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಪರಿಷತ್ತು ನಾಡು-ನುಡಿಯ ಸೇವೆಗಾಗಿ ಕಾರ್ಯನಿರ್ವಹಿಸುತ್ತಿರುವ ಸಾರ್ವಜನಿಕ ಸಂಸ್ಥೆಯಾಗಿದ್ದು, ಆಡಳಿತದಲ್ಲಿ ಹೊಸ ಚಿಂತನೆ ಹಾಗೂ ಹೊಸ ನಾಯಕತ್ವಕ್ಕೆ ಅವಕಾಶ ಕಲ್ಪಿಸುವ ಅಗತ್ಯವಿದೆ ಎಂದರು.
2018ರ ಮಾರ್ಚ್ 15ರಂದು ಉಡುಪಿ ಜಿಲ್ಲೆಯ ಕೋಟಾದಲ್ಲಿ ನಡೆದ ವಿಶೇಷ ಸರ್ವ ಸದಸ್ಯರ ಸಭೆಯಲ್ಲಿ ಪರಿಷತ್ತಿನ ಅಧ್ಯಕ್ಷರ ಅಧಿಕಾರಾವಧಿಯನ್ನು ಮೂರು ವರ್ಷದಿಂದ ಐದು ವರ್ಷಕ್ಕೆ ವಿಸ್ತರಿಸುವ ನಿರ್ಣಯ ಕೈಗೊಳ್ಳಲಾಗಿತ್ತು. ಇದೀಗ ಈ ನಿರ್ಧಾರವನ್ನು ಮರುಪರಿಶೀಲಿಸಿ, ಮತ್ತೆ ಮೂರು ವರ್ಷಗಳ ಅವಧಿಗೆ ಸೀಮಿತಗೊಳಿಸಬೇಕು ಎಂದು ಆಗ್ರಹಿಸಿದರು.
ಕನ್ನಡ ಸಾಹಿತ್ಯ ಪರಿಷತ್ತು ಯಾವುದೇ ವ್ಯಕ್ತಿಯ ವೈಯಕ್ತಿಕ ಸಂಸ್ಥೆಯಲ್ಲ. ಇದು ಕನ್ನಡಿಗರು, ಸಾಹಿತಿಗಳು ಹಾಗೂ ನಾಡು-ನುಡಿಯ ಸೇವೆಗಾಗಿ ಇರುವ ಸಾರ್ವಜನಿಕ ಸಂಸ್ಥೆಯಾಗಿದೆ. ಆದ್ದರಿಂದ ನಿಗದಿತ ಮೂರು ವರ್ಷಗಳ ಅವಧಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿ, ನಂತರ ಹೊಸಬರಿಗೆ ಅವಕಾಶ ನೀಡುವ ವ್ಯವಸ್ಥೆ ಜಾರಿಗೆ ಬರಬೇಕು ಎಂದು ಹೇಳಿದರು.
ಕಲಾ ಸಂಕುಲ ಸಂಸ್ಥೆಯ ಕಾರ್ಯದರ್ಶಿ ಮಾರುತಿ ಬಡಿಗೇರ್ ಮಾತನಾಡಿ, ಬೈಲಾ ತಿದ್ದುಪಡಿ ಮೂಲಕ ಅಧ್ಯಕ್ಷರ ಅಧಿಕಾರಾವಧಿಯನ್ನು ಐದು ವರ್ಷದಿಂದ ಮೂರು ವರ್ಷಕ್ಕೆ ಇಳಿಸುವ ಕುರಿತು ಕನ್ನಡ ಸಾಹಿತ್ಯ ಪರಿಷತ್ತಿನ ಆಡಳಿತಾಧಿಕಾರಿ ಕೆ.ಎ.ದಯಾನಂದ್ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದರು.
ಮೂರು ವರ್ಷಗಳಿಗೊಮ್ಮೆ ಹೊಸ ನಾಯಕತ್ವಕ್ಕೆ ಅವಕಾಶ ನೀಡುವುದರಿಂದ ಪರಿಷತ್ತಿನಲ್ಲಿ ಹೊಸ ಚಿಂತನೆ, ಹೊಸ ನಾಯಕತ್ವ ಹಾಗೂ ಮತ್ತಷ್ಟು ಪರಿಣಾಮಕಾರಿ ಕನ್ನಡ ಸೇವೆಗೆ ಅವಕಾಶ ದೊರೆಯಲಿದೆ ಎಂದು ತಿಳಿಸಿದರು.






