Raichur | ವಿಶ್ವಕರ್ಮ ಸಮುದಾಯದವರಿಗೆ ಹೊಲಿಗೆ ಯಂತ್ರ ಯೋಜನೆಗೆ ಅರ್ಜಿ ಆಹ್ವಾನ

ರಾಯಚೂರು: ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ವತಿಯಿಂದ 2026-27ನೇ ಸಾಲಿನಲ್ಲಿ ಅನುಷ್ಠಾನಗೊಳಿಸಲಾಗುತ್ತಿರುವ ಹೊಲಿಗೆ ಯಂತ್ರ ಯೋಜನೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹತೆಗಳು: ಅರ್ಜಿದಾರರು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು. ಸರ್ಕಾರದ ಆದೇಶ ಸಂಖ್ಯೆ ಸಕಇ/225/ಬಿಸಿಎ/2000, ದಿನಾಂಕ 30-03-2002ರ ಅನ್ವಯ ವಿಶ್ವಕರ್ಮ ಸಮುದಾಯ ಹಾಗೂ ಅದರ ಉಪಜಾತಿಗಳಿಗೆ ಸೇರಿದವರಾಗಿರಬೇಕು. ಚಾಲ್ತಿಯಲ್ಲಿರುವ ಜಾತಿ ಮತ್ತು ಆದಾಯ ಪ್ರಮಾಣಪತ್ರ ಹೊಂದಿರುವುದು ಕಡ್ಡಾಯ. ಅರ್ಜಿದಾರರ ವಯಸ್ಸು 18ರಿಂದ 55 ವರ್ಷಗಳೊಳಗಿರಬೇಕು. ಕುಟುಂಬದ ಒಬ್ಬರಿಗೆ ಮಾತ್ರ ಈ ಸೌಲಭ್ಯ ಒದಗಿಸಲಾಗುವುದು.
ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ ಗ್ರಾಮೀಣ ಪ್ರದೇಶದಲ್ಲಿ 98,000 ರೂ. ಹಾಗೂ ನಗರ ಪ್ರದೇಶದಲ್ಲಿ 1,20,000 ರೂ. ಮಿತಿಯೊಳಗಿರಬೇಕು. ಫಲಾನುಭವಿಗಳ ಆಯ್ಕೆಯಲ್ಲಿ ಮಹಿಳೆಯರಿಗೆ ಶೇ.33, ವಿಕಲಚೇತನರಿಗೆ ಶೇ.5 ಹಾಗೂ ತೃತೀಯ ಲಿಂಗಿಗಳಿಗೆ ಶೇ.1ರಷ್ಟು ಮೀಸಲಾತಿ ಕಲ್ಪಿಸಲಾಗಿದೆ.
ಅರ್ಜಿ ಸಲ್ಲಿಸುವಾಗ ಅರ್ಜಿದಾರರ ಆಧಾರ್ ಕಾರ್ಡ್‌ನಲ್ಲಿರುವ ಹೆಸರು ಮತ್ತು ವಿಳಾಸ, ಜಾತಿ ಹಾಗೂ ಆದಾಯ ಪ್ರಮಾಣಪತ್ರ ಮತ್ತು ಬ್ಯಾಂಕ್ ಖಾತೆ ಪುಸ್ತಕದಲ್ಲಿರುವ ವಿವರಗಳು ಪರಸ್ಪರ ತಾಳೆಯಾಗಿರಬೇಕು. ಶ್ರೀ, ಶ್ರೀಮತಿ, ಕುಮಾರಿ ಮುಂತಾದ ಗೌರವಸೂಚಕ ಪದಗಳೂ ಸೇರಿದಂತೆ ಎಲ್ಲ ವಿವರಗಳು ಒಂದೇ ರೀತಿಯಾಗಿರಬೇಕು.
ಅರ್ಜಿಗಳನ್ನು ಬೆಂಗಳೂರು-ಒನ್, ಕರ್ನಾಟಕ-ಒನ್, ಅಟಲ್-ಜಿ ಜನಸ್ನೇಹಿ ಕೇಂದ್ರ ಹಾಗೂ ನಾಗರಿಕ ಸೇವಾ ಕೇಂದ್ರಗಳಲ್ಲಿ ಸೇವಾಸಿಂಧು ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಡಿಸೆಂಬರ್ 24ರೊಳಗೆ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ನಿಗಮದ ವೆಬ್‌ಸೈಟ್ https://kvcdcl.karnataka.gov.in ಅಥವಾ ನಿಗಮದ ಕೇಂದ್ರ ಕಚೇರಿಯ ದೂರವಾಣಿ ಸಂಖ್ಯೆಗಳಾದ 080-22374848 ಹಾಗೂ 7899899039ಗೆ ಸಂಪರ್ಕಿಸಬಹುದು ಎಂದು ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






