Raichur | ಹಿಂದುಳಿದ ವರ್ಗಗಳ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ

ರಾಯಚೂರು, ಸೆ. 8: ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮವು 2026-27ನೇ ಸಾಲಿನ ವಿವಿಧ ಯೋಜನೆಗಳ ಸೌಲಭ್ಯಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಸೇವಾ ಸಿಂಧು ತಂತ್ರಾಂಶದ ಮೂಲಕ ಅರ್ಜಿ ಆಹ್ವಾನಿಸಿದೆ.
ನಿಗಮದಿಂದ ಡಿ. ದೇವರಾಜ ಅರಸು ಸ್ವಯಂ ಉದ್ಯೋಗ ವೈಯಕ್ತಿಕ ಸಾಲ ಯೋಜನೆ, ಗಂಗಾ ಕಲ್ಯಾಣ ನೀರಾವರಿ ಯೋಜನೆ, ಅರಿವು ಶೈಕ್ಷಣಿಕ ಸಾಲ ಯೋಜನೆ, ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗಕ್ಕೆ ಸಾಲ ಯೋಜನೆ, ಸ್ವಾವಲಂಬಿ ಸಾರಥಿ ಯೋಜನೆ ಹಾಗೂ ಹೊಲಿಗೆ ಯಂತ್ರ ವಿತರಣೆ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ.
ಈ ಯೋಜನೆಗಳು ವಿಶ್ವಕರ್ಮ, ಉಪ್ಪಾರ, ಅಂಬಿಗ, ಸವಿತಾ, ಮಡಿವಾಳ, ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯ, ಒಕ್ಕಲಿಗ, ಲಿಂಗಾಯತ, ಕಾಡುಗೊಲ್ಲ, ಮರಾಠ, ತಿಗಳ, ಗಾಣಿಗ, ಕುಂಬಾರ, ಹಪಡದ, ಕೊಡವ ಮತ್ತು ಈಡಿಗ ಸಮುದಾಯಗಳ ಉಪವರ್ಗಗಳನ್ನು ಹೊರತುಪಡಿಸಿ ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು 3ಬಿ ವ್ಯಾಪ್ತಿಯ ಉಳಿದ ಸಮುದಾಯಗಳಿಗೆ ಅನ್ವಯವಾಗುತ್ತವೆ.
ಅಭ್ಯರ್ಥಿಗಳು ಸೆಪ್ಟೆಂಬರ್ 30 ರೊಳಗೆ ಸೇವಾ ಸಿಂಧು ಪೋರ್ಟಲ್, ಗ್ರಾಮ ಒನ್, ಬೆಂಗಳೂರು ಒನ್ ಹಾಗೂ ಕರ್ನಾಟಕ ಒನ್ ಸೇವಾ ಕೇಂದ್ರಗಳ ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವ ವೇಳೆ ಆಧಾರ್‌ಗೆ ಜೋಡಣೆಯಾದ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆ ಕಡ್ಡಾಯವಾಗಿದ್ದು, ಆಧಾರ್, ಜಾತಿ ಮತ್ತು ಆದಾಯ ಪ್ರಮಾಣಪತ್ರ ಹಾಗೂ ಬ್ಯಾಂಕ್ ಪಾಸ್‌ಬುಕ್‌ನಲ್ಲಿರುವ ಹೆಸರು ಒಂದೇ ರೀತಿಯಲ್ಲಿ ಹೊಂದಾಣಿಕೆಯಾಗಿರಬೇಕು ಎಂದು ನಿಗಮ ತಿಳಿಸಿದೆ.
ಈಗಾಗಲೇ ನಿಗಮದ ಯಾವುದೇ ಯೋಜನೆಯ ಸೌಲಭ್ಯ ಪಡೆದಿರುವವರು ಹಾಗೂ ಅವರ ಕುಟುಂಬದವರು ಮತ್ತೆ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ. 2024-25 ಹಾಗೂ 2025-26ನೇ ಸಾಲಿನಲ್ಲಿ ಅರ್ಜಿ ಸಲ್ಲಿಸಿ ಇನ್ನೂ ಸೌಲಭ್ಯ ಪಡೆಯದ ಫಲಾಪೇಕ್ಷಿಗಳು ಮರು ಅರ್ಜಿ ಸಲ್ಲಿಸುವ ಅಗತ್ಯವಿಲ್ಲ ಎಂದು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವೆಬ್‌ಸೈಟ್, ಸಹಾಯವಾಣಿ 080-22374832, 8050770004, 8050770005 ಅಥವಾ ರಾಯಚೂರು ಜಿಲ್ಲಾ ಕಚೇರಿ ದೂರವಾಣಿ 08532-250440 ಸಂಪರ್ಕಿಸುವಂತೆ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.






