ರಾಯಚೂರು | ಸಾಲಗುಂದಾ ಏತನೀರಾವರಿ ಯೋಜನೆಗೆ ಅನುಮೋದನೆ : ಶಾಸಕ ಹಂಪನಗೌಡ ಬಾದರ್ಲಿ

ಹಂಪನಗೌಡ ಬಾದರ್ಲಿ
ರಾಯಚೂರು : 173 ಕೋಟಿ ರೂ. ವೆಚ್ಚದ ಸಾಲಗುಂದಾ ಏತನೀರಾವರಿ ಯೋಜನೆಗೆ ರಾಜ್ಯ ಸರಕಾರದಿಂದ ಅನುಮೋದನೆ ದೊರೆತಿದೆ ಎಂದು ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ ತಿಳಿಸಿದರು.
ಸಿಂಧನೂರು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರತಿ ತಾಲೂಕಿನಿಂದ ಒಂದೊಂದು ಯೋಜನೆಗಳಿಗೆ ಅನುಮೋದನೆ ನೀಡಿದ್ದು, ಅದರಂತೆ ಸಿಂಧನೂರು ತಾಲೂಕಿನ ಸಾಲಗುಂದಾ ಏತ ನೀರಾವರಿ ಯೋಜನೆಗೆ ಅನುಮೋದನೆ ಸಿಕ್ಕಿದೆ ಎಂದರು.
ಸಾಲಗುಂದಾ ಏತ ನೀರಾವರಿ ಯೋಜನೆಯು 17 ಸಾವಿರ ಎಕರೆ ಪ್ರದೇಶಕ್ಕೆ ನೀರುಣಿಸಲಿದ್ದು, ಸಾಲಗುಂದಾ, ಸೋಮಲಾಪುರ, ವೆಂಕಟೇಶ್ವರಕ್ಯಾಂಪ್, ಬೂದಿವಾಳಕ್ಯಾಂಪ್, ಬೂದಿವಾಳ, ಕನ್ನಾರಿ, ಉಪ್ಪಳ, ದಡೇಸ್ಗೂರು, ಅಲಬನೂರು, ಮಲದಿನ್ನಿ ಕೊನೆ ಟೇಲೇಂಡ್ ಭಾಗದ ರೈತರಿಗೆ ನೀರು ತಲುಪಲಿದೆ. ಎರಡು-ಮೂರು ತಿಂಗಳಲ್ಲಿ ಟೆಂಡರ್ ಪ್ರಕ್ರಿಯೆ ಆರಂಭವಾಗಲಿದೆ. ಮುಳ್ಳೂರು ಹತ್ತಿರದ ಬ್ಯಾರೇಜ್ ವೇರ್ ನಿರ್ಮಾಣ ಬಜೆಟ್ನಲ್ಲಿಟ್ಟುಕೊಳ್ಳುವದಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಭರವಸೆ ನೀಡಿದ್ದಾರೆ.
ಸಿಂಧನೂರು ತಾಲೂಕಿನಿಂದ ಐದು ಯೋಜನೆಗಳ ಡಿಪಿಆರ್ ಸಲ್ಲಿಸಲಾಗಿತ್ತು. 123 ಕೋಟಿ ರೂ. ವೆಚ್ಚದ ಸಾಲಗುಂದಾ ನೀರಾವರಿ, 187 ಕೋಟಿ ರೂ. ವೆಚ್ಚದ ಶ್ರೀ ಸಿದ್ದಲಿಂಗೇಶ್ವರ ಏತ ನೀರಾವರಿ ಯೋಜನೆ, 117 ಕೋಟಿ ರೂ. ವೆಚ್ಚದ ಚನ್ನಳ್ಳಿ ಏತ ನೀರಾವರಿ ಯೋಜನೆ, ವಳಬಳ್ಳಾರಿ ಹತ್ತಿರ ತುಂಗಭದ್ರಾ ನದಿಗೆ 49ಕೋಟಿ ರೂ. ವೆಚ್ಚದ ಹಾಗೂ ಮುಳ್ಳೂರು ಹತ್ತಿರ 29 ಕೋಟಿ ರೂ ವೆಚ್ಚದಲ್ಲಿ ನೀರು ಸಂಗ್ರಹಿಸುವ ಬ್ಯಾರೇಜ್ ವೇರ್ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು ಎಂದು ವಿವರಿಸಿದರು.
ರಾಜ್ಯ ಸರಕಾರ ಪ್ರಸಕ್ತ ವರ್ಷ 60 ಆದರ್ಶ ಪಿಯು ಮಹಾವಿದ್ಯಾಲಯ ಆರಂಭಿಸುವ ಗುರಿ ಹೊಂದಿದೆ. ಅದರಲ್ಲಿ ಸಿಂಧನೂರು ಸೇರಿದೆ. ಈಗಾಗಲೇ 68 ಲಕ್ಷ ರೂ.ಗಳ ಅನುದಾನ ಬಿಡುಗಡೆಯಾಗಿದೆ. ಅತ್ಯಾಧುನಿಕ ಸೌಲಭ್ಯಗಳನ್ನು ಮಹಾವಿದ್ಯಾಲಯ ಒಳಗೊಂಡಿರಲಿದೆ. ಈ ಶೈಕ್ಷಣಿಕ ವರ್ಷದಿಂದಲೇ ಆರಂಭವಾಗಲಿದೆ. ಸಿಂಧನೂರಿನಲ್ಲಿ ಇಂಜಿಯನಿರಿಂಗ್ ಹಾಗೂ ಟೂಲ್ಸ್ ವಿಷಯದಲ್ಲಿ ಕೌಶಲ್ಯ ತರಬೇತಿ ಕೇಂದ್ರ ಆರಂಭಿಸುವ ಕುರಿತು ಬಜೆಟ್ನಲ್ಲಿ ಮಂಡನೆಗೊಳ್ಳುವ ನಿರೀಕ್ಷೆಯಿದೆ. ನವಲಿ ಸಮಾನಾಂತರ ಜಲಾಶಯದ ಡಿಪಿಆರ್ ಹಾಗೂ ಆಂಧ್ರಪ್ರದೇಶದ ಬೇಡಿಕೆಯಾದ ಅನಂತಪುರವರೆಗೆ ಸಮನಾಂತರ ಕಾಲುವೆ ನಿರ್ಮಾಣ ಎರಡು ವಿಷಯಗಳು ಬೋರ್ಡ್ ಗೆ ಬಂದಿವೆ ಎಂದರು.
ಈಗಾಗಲೇ ಸಿಂಧನೂರಿಗೆ ಕೃಷಿ ಇಲಾಖೆಯ ಉಪನಿರ್ದೇಶಕರ, ಜೆಸ್ಕಾಂ ಸಿಇ ಕಚೇರಿ ಮಂಜೂರಾಗಿವೆ. ಶೈಕ್ಷಣಿಕ ಜಿಲ್ಲೆ, ಎಆರ್ಟಿಓ ಕಛೇರಿ ಪ್ರಸ್ತಾವನೆ ಸರಕಾರದ ಮುಂದಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿ.ಪಂ.ಮಾಜಿ ಸದಸ್ಯ ಬಸವರಾಜ ಹಿರೇಗೌಡರ್ ಇದ್ದರು.







