Raichur | ಅಶ್ವಿನಿ, ರಾಣೆಮ್ಮ, ಭೂಮಾನಂದ ಕೊಲೆ ಪ್ರಕರಣ; ನಿಷ್ಪಕ್ಷಪಾತ ತನಿಖೆಗೆ ಆಗ್ರಹ

ರಾಯಚೂರು: ಹೊಕ್ರಾಣಿ ಗ್ರಾಮದ ಯುವತಿ ಅಶ್ವಿನಿ, ಕರಡಕಲ್‌ನ ರಾಣೆಮ್ಮ ಹಾಗೂ ಭೂಮಾನಂದ ಕೊಲೆ ಪ್ರಕರಣಗಳನ್ನು ಖಂಡಿಸಿ, ನಿಷ್ಪಕ್ಷಪಾತ ತನಿಖೆ ನಡೆಸಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ದಲಿತಪರ ಸಂಘಟನೆಗಳ ಮುಖಂಡರ ನಿಯೋಗ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹಾಗೂ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು.
ಮಾಜಿ ಸಚಿವ ಎನ್. ಬೋಸರಾಜು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಅಜಯ್ ಸಿಂಗ್ ಅವರ ನೇತೃತ್ವದಲ್ಲಿ ನಿಯೋಗವು ಬೆಂಗಳೂರಿನಲ್ಲಿ ಸಚಿವರು ಹಾಗೂ ಮುಖ್ಯಮಂತ್ರಿಯನ್ನು ಭೇಟಿ ಮಾಡಿತು.
ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಹೊಕ್ರಾಣಿ ಗ್ರಾಮದ ಕುಮಾರಿ ಅಶ್ವಿನಿ ಕೊಲೆ ಪ್ರಕರಣ ಹಾಗೂ ದೇವದುರ್ಗ ತಾಲೂಕಿನ ಸಂಕೇಶ್ವರಹಾಳ ಗ್ರಾಮದ ಯುವಕ ಭೂಮಾನಂದ ಕೊಲೆ ಪ್ರಕರಣದ ಕುರಿತು ನಿಯೋಗವು ಸರ್ಕಾರದ ಗಮನಕ್ಕೆ ತಂದಿತು.
ಪ್ರಕರಣಗಳ ತನಿಖೆಯನ್ನು ಯಾವುದೇ ರಾಜಕೀಯ ಅಥವಾ ಇತರೆ ಒತ್ತಡಗಳಿಗೆ ಒಳಗಾಗದೆ ನಿಷ್ಪಕ್ಷಪಾತವಾಗಿ ನಡೆಸಬೇಕು. ಆರೋಪಿಗಳನ್ನು ಶೀಘ್ರವಾಗಿ ಬಂಧಿಸಿ, ಕಾನೂನುಬದ್ಧವಾಗಿ ಕಠಿಣ ಶಿಕ್ಷೆಗೆ ಒಳಪಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಮುಖಂಡರು ಒತ್ತಾಯಿಸಿದರು.
ಜಿಲ್ಲೆಯಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕಾನೂನು ಸುವ್ಯವಸ್ಥೆ ಬಲಪಡಿಸಿ, ಸಂತ್ರಸ್ತ ಕುಟುಂಬಗಳಿಗೆ ನ್ಯಾಯ ಹಾಗೂ ಅಗತ್ಯ ಭದ್ರತೆ ಒದಗಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ರಾಯಚೂರು ಯಾದಗಿರಿ ಲೋಕಸಭಾ ಸದಸ್ಯ ಜಿ ಕುಮಾರ್ ನಾಯಕ್, ಜಿಲ್ಲೆಯ ಶಾಸಕರಾದ ಜಿ ಹಂಪಯ್ಯ ನಾಯಕ್ ಸಾಹುಕಾರ್, ಬಸನಗೌಡ ತುರುವಿಹಾಳ ವಿಧಾನ ಪರಿಷತ್ತಿನ ಸದಸ್ಯ ಬಸನಗೌಡ ಬಾದರ್ಲಿ, ದಲಿತ ಸಂಘಟನೆಗಳ ಅಂಬಣ್ಣ ಅರೋಲಿಕರ್,ಮಲ್ಲೇಶ ಕೊಲುಮಿ, ಭೀಮಣ್ಣ ಮಂಚಾಲ,ಕೆ.ಇ ಕುಮಾರ ಮತ್ತಿತರರು ಉಪಸ್ಥಿತರಿದ್ದರು.






