ರಾಯಚೂರು | ನ.18 ರಂದು ಸಂವಿಧಾನ ಸಂರಕ್ಷಣಾ ಪಡೆಯಿಂದ ಜಾಗೃತಿ ಜಾಥಾ

ರಾಯಚೂರು: ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ನ.18ರಂದು ನಗರದಲ್ಲಿ ಸಂವಿಧಾನ ಸಂರಕ್ಷಣಾ ಪಡೆಯ ವತಿಯಿಂದ ಸಂವಿಧಾನ ಜಾಗೃತಿ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಮುಖಂಡ ಎಂ.ಆರ್.ಭೇರಿ ಹೇಳಿದರು.
ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನ.18 ರಂದು ಸಂವಿಧಾನ ಸಂರಕ್ಷಣಾ ದಿನ ಹಾಗೂ ನ.26ರಂದು ದೇಶದ ಸಂವಿಧಾನವನ್ನು ಸಮರ್ಪಿಸಿಕೊಂಡ ದಿನದ ಅಂಗವಾಗಿ ದಲಿತಪರ ಸಂಘಟನೆಗಳು, ರೈತಪರ, ಮಹಿಳಾ ಹಾಗೂ ಮಾನವ ಹಕ್ಕುಗಳ ಪರ ಹೋರಾಟ ಮಾಡುವ ಸಂಘಗಳ ಸಹಯೋಗದಲ್ಲಿ ನಗರದಲ್ಲಿ ಸಂವಿಧಾನದ ಕುರಿತು ಜಾಗೃತಿ ಮೂಡಿಸಲು ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದರು.
ಜಾಥಾದಲ್ಲಿ ಸಂವಿಧಾನ ಪೀಠಿಕೆಯುಳ್ಳ ವಾಹನ ಇರುತ್ತದೆ. ಅದರ ಹಿಂದೆ ಸುಮಾರು 1,000ಕ್ಕೂ ಹೆಚ್ಚಿನ ಜನರು ಜಾಥಾದಲ್ಲಿ ಭಾಗವಹಿಸಲಿದ್ದಾರೆ. ಜಾಥಾವು ನಗರದ ಕರ್ನಾಟಕ ಸಂಘದಿಂದ ಪ್ರಮುಖ ರಸ್ತೆಗಳ ಮೂಲಕ ಡಾ.ಅಂಬೇಡ್ಕರ್ ವೃತ್ತದಲ್ಲಿ ಬಂದು ಸೇರಲಿದೆ. ನಂತರ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಇದೇ ವೇಳೆ ರಮಾಬಾಯಿ ನಾಟಕ ಪ್ರದರ್ಶನವೂ ನಡೆಯಲಿದೆ ಎಂದರು.
ಜಾಥಾದಲ್ಲಿ ಭಾಗವಹಿಸುವ ಪ್ರತಿಯೊಬ್ಬರೂ ಪುರುಷರು ಬಿಳಿ ಅಂಗಿ, ನೀಲಿ ಪ್ಯಾಂಟು ಮತು ನೀಲಿ ಶಾಲು ಧರಿಸಬೇಕು. ಮಹಿಳೆಯರು ನೀಲಿ ದಡಿಯುಳ್ಳ ಬಿಳಿ ಸೀರೆ ಧರಿಸಬೇಕು. ಕೈಯಲ್ಲಿ ದಮ್ಮ ಚಕ್ರವುಳ್ಳ ನೀಲಿ ದ್ವಜ ಹಿಡಿಯಬೇಕು ಎಂದು ತಿಳಿಸಿದರು.
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಸೋಲಿಸಿದ್ದು, ಮನುವಾದಿಗಳು, ಕೇವಲ ಪಕ್ಷದ ಹೆಸರು ಮಾತ್ರ ಇದೆ. ರಾಜಕೀಯ ಪಕ್ಷದಲ್ಲಿರುವವರೆಲ್ಲ ಮನುವಾದಿಗಳೇ ಆಗಿದ್ದಾರೆ. ಅಂಬೇಡ್ಕರ್ ಅವರ ಬಗ್ಗೆ ಮಾತನಾಡುವ ರಾಜಕೀಯ ಪಕ್ಷಗಳಿಗೆ ಅಂಬೇಡ್ಕರ್ ಎತ್ತರದಲ್ಲಿದ್ದಾಗ ಮಾತ್ರ ಕಾಣುತ್ತಾರೆ. ನಿಜವಾಗಿಯೂ ಅಂಬೇಡ್ಕರ್ ಅವರನ್ನು ಸೋಲಿಸಿದ್ದು, ಕಾಂಗ್ರೆಸ್ ಪಕ್ಷವಲ್ಲ ಅಲ್ಲಿರುವ ಮತ್ತು ಇತರೆ ರಾಜಕೀಯ ಪಕ್ಷದಲ್ಲಿರುವ ಮನುವಾದಿಗಳಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಕೆ.ಇ.ಕುಮಾರ, ವಿಶ್ವನಾಥ ಪಟ್ಟಿ, ಜಾನ್ ವೆಸ್ಲಿ, ವಸಂತ, ಶ್ರೀನಿವಾಸ ಕೊಪ್ಪರ, ವಿಜಯರಾಣಿ ಸೇರಿದಂತೆ ಅನೇಕರಿದ್ದರು.







