ರಾಯಚೂರು | ಕುಡಿಯುವ ನೀರಿನ ತೊಂದರೆ ಆಗದಂತೆ ಎಚ್ಚರ ವಹಿಸಿ : ಸಂಸದ ಜಿ.ಕುಮಾರ ನಾಯಕ್
ವಿವಿಧ ಇಲಾಖೆ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ

ರಾಯಚೂರು : ದೇವದುರ್ಗ ತಾಲೂಕಿನಲ್ಲಿ ಕುಡಿಯುವ ನೀರಿನ ತೊಂದರೆಯಾಗದಂತೆ ಎಚ್ಚರ ವಹಿಸಬೇಕು ಎಂದು ಸಂಸದ ಜಿ.ಕುಮಾರ ನಾಯಕ್ ಅಧಿಕಾರಿಗಳಿಗೆ ಸೂಚಿಸಿದರು.
ದೇವದುರ್ಗ ಪಟ್ಟಣದ ತಾಲೂಕು ಪಂಚಾಯತ್ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ಅಧಿಕಾರಿಗಳ ಸಭೆ ನಡೆಸಿದ ಅವರು, ಬೇಸಿಗೆ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಮುಂಜಾಗ್ರತೆ ಕ್ರಮ ಕೈಗೊಳ್ಳಿ ಎಂದರು.
ಕುಡಿಯುವ ನೀರಿನ ವಿಷಯಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರೂ, ತಮ್ಮ ಗಮನಕ್ಕೆ ತರಬೇಕು. ನಾನು ಈ ಬಗ್ಗೆ ಜಿಲ್ಲಾಧಿಕಾರಿಗಳು ಮತ್ತು ಮೇಲಾಧಿಕಾರಿಗಳ ಗಮನ ಸೆಳೆದು ಪರಿಹಾರಕ್ಕೆ ಕ್ರಮ ಸೂಚಿಸುತ್ತೇನೆ. ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಎಚ್ಚರ ವಹಿಸುವುದು ನಿಮ್ಮ ಜವಾಬ್ದಾರಿ ಎಂದರು.
ಕುಡಿಯುವ ನೀರಿನ ಯೋಜನೆಗಳಿಗೆ ವಿದ್ಯುತ್ ಆಡೆತಡೆಯಾಗದಂತೆ ಕ್ರಮವಹಿಸುವ ಜವಾಬ್ದಾರಿ ಜೆಸ್ಕಾಂ ಅಧಿಕಾರಿಗಳದ್ದು, ವಿದ್ಯುತ್ ಕಡಿತದಿಂದ ನೀರು ಸರಬರಾಜಿಗೆ ವ್ಯತ್ಯಯವಾದರೆ ಜೆಸ್ಕಾಂ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು ಎಂದು ಎಚ್ಚರಿಸಿದರು.
ಈ ವೇಳೆಯಲ್ಲಿ ತಹಶೀಲ್ದಾರ್, ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ, ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.







