Raichur | ಹೊಕ್ರಾಣಿಯನ್ನು ‘ODF ಪ್ಲಸ್ 5-ಸ್ಟಾರ್’ ಘೋಷಣೆ ಪ್ರಶ್ನಿಸಿ ಭೀಮ್ ಆರ್ಮಿ ಮನವಿ

ರಾಯಚೂರು : ಸಿರವಾರ ತಾಲೂಕಿನ ಹೊಕ್ರಾಣಿ ಗ್ರಾಮದಲ್ಲಿ ಶೌಚಾಲಯ ಮತ್ತು ಸೋಕ್‌ಪಿಟ್ ನಿರ್ಮಾಣದ ದಾಖಲೆಗಳು SBM ಪೋರ್ಟಲ್‌ನಲ್ಲಿ ಲಭ್ಯವಿಲ್ಲದಿದ್ದರೂ ಗ್ರಾಮವನ್ನು ODF Plus Model 5-Star ಎಂದು ಘೋಷಿಸಲಾಗಿದೆ ಎಂದು ಆರೋಪಿಸಿ, ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಭೀಮ್ ಆರ್ಮಿ ಏಕ್ತಾ ಮಂಚ್ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ.
ಮನವಿಯಲ್ಲಿ, ಹೊಕ್ರಾಣಿ ಗ್ರಾಮದ ಪರಿಶಿಷ್ಟ ಜಾತಿ ಕಾಲೋನಿಯ ಕೆಲವು ಕುಟುಂಬಗಳಿಗೆ ವೈಯಕ್ತಿಕ ಹಾಗೂ ಸಮುದಾಯ ಶೌಚಾಲಯಗಳ ಸೌಲಭ್ಯ ಇಲ್ಲದಿರುವುದರಿಂದ ಮಹಿಳೆಯರು ಮತ್ತು ಯುವತಿಯರು ಬಯಲು ಶೌಚಕ್ಕೆ ತೆರಳುವ ಪರಿಸ್ಥಿತಿ ಇದೆ ಎಂದು ಆರೋಪಿಸಲಾಗಿದೆ.
ಇದೇ ವೇಳೆ ಹೊಕ್ರಾಣಿ ಗ್ರಾಮದ ಅಶ್ವಿನಿ ಅತ್ಯಾಚಾರ ಮತ್ತು ಹತ್ಯೆ ಪ್ರಕರಣವನ್ನು ಉಲ್ಲೇಖಿಸಿದ ಸಂಘಟನೆ, ಬಯಲು ಶೌಚಕ್ಕೆ ತೆರಳಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದು ದೂರಿದೆ.
SBM ಪೋರ್ಟಲ್‌ನಲ್ಲಿ ಗ್ರಾಮವನ್ನು ಬಯಲು ಶೌಚಮುಕ್ತ ಮಾದರಿ ಗ್ರಾಮವೆಂದು ಘೋಷಿಸಿದ್ದರೂ, ಜಿಲ್ಲಾ ಪಂಚಾಯಿತಿ ಸಿಇಒ ಮಟ್ಟದಲ್ಲಿ ಅಗತ್ಯ ಮೇಲ್ವಿಚಾರಣೆ ನಡೆದಿಲ್ಲ ಹಾಗೂ ಎರಡನೇ ಹಂತದ ಪರಿಶೀಲನೆಯ ದಾಖಲೆಗಳೂ ಇಲ್ಲ ಎಂದು ಮನವಿಯಲ್ಲಿ ಆರೋಪಿಸಲಾಗಿದೆ. ಆದರೂ ಮಾರ್ಚ್ 4, 2026ರಂದು ಗ್ರಾಮವನ್ನು ODF Plus Model 5-Star ಎಂದು ಘೋಷಿಸಿರುವುದು ಪ್ರಶ್ನಾರ್ಹವಾಗಿದೆ ಎಂದು ಸಂಘಟನೆ ಹೇಳಿದೆ.
ಜಿಲ್ಲಾ ಪಂಚಾಯಿತಿ ಸಿಇಒ ಅವರ ಮೇಲ್ವಿಚಾರಣೆಯ ವೈಫಲ್ಯದ ಕುರಿತು ತನಿಖೆ ನಡೆಸಬೇಕು. ಕೆಳಹಂತದ ಸಿಬ್ಬಂದಿಯ ವಿರುದ್ಧ ಮಾತ್ರವಲ್ಲದೆ, ಸಂಬಂಧಿಸಿದ ಮೇಲ್ವಿಚಾರಣಾಧಿಕಾರಿಗಳ ಜವಾಬ್ದಾರಿಯನ್ನೂ ಪರಿಶೀಲಿಸಬೇಕು ಎಂದು ಭೀಮ್ ಆರ್ಮಿ ಆಗ್ರಹಿಸಿದೆ.
ಇದಲ್ಲದೆ, ಸಿಇಒ ವಿರುದ್ಧ ಇಲಾಖಾ ತನಿಖೆ ನಡೆಸಿ ಅಮಾನತುಗೊಳಿಸಬೇಕು, ಪ್ರಕರಣವನ್ನು ಎಸ್‌ಐಟಿ ಮತ್ತು ಲೋಕಾಯುಕ್ತ ತನಿಖೆಗೆ ಒಪ್ಪಿಸಬೇಕು ಹಾಗೂ ಎಸ್‌ಸಿ/ಎಸ್‌ಟಿ ಆಯೋಗ ಮತ್ತು ಮಹಿಳಾ ಆಯೋಗ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಅಶ್ವಿನಿ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸುವುದರ ಜೊತೆಗೆ ಹೊಕ್ರಾಣಿ ಗ್ರಾಮದಲ್ಲಿ ತಕ್ಷಣ ವೈಯಕ್ತಿಕ ಮತ್ತು ಸಮುದಾಯ ಶೌಚಾಲಯಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸಂಘಟನೆ ಮನವಿ ಮಾಡಿದೆ.






