ರಾಯಚೂರು | ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಬೈಕ್ ರ‍್ಯಾಲಿ

ರಾಯಚೂರು:ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ನಗರದ ಮಹಾನಗರ ಪಾಲಿಕೆಯ ಆಯುಕ್ತರ ಕಚೇರಿಯ ಆವರಣದಲ್ಲಿ ಶುಕ್ರವಾರ "ನನ್ನ ಮತ ನನ್ನ ಹಕ್ಕು" ಎಂಬ ಧ್ಯೇಯ ವಾಕ್ಯದಡಿ ಬೈಕ್ ರ‍್ಯಾಲಿಗೆ ಚಾಲನೆ ನೀಡಲಾಯಿತು.
ರಾಯಚೂರಿನಿಂದ ಬೆಂಗಳೂರುವರೆಗೆ ಬೈಕ್ ರ‍್ಯಾಲಿ ಆಯೋಜಿಸಿದ್ದು, ಹತ್ತು ದ್ವಿಚಕ್ರ ವಾಹನ ಸವಾರರು ಬೆಂಗಳೂರಿಗೆ ಇಂದು ಮಧ್ಯಾಹ್ನ 3 ಗಂಟೆಗೆ ಪ್ರಯಾಣ ಬೆಳೆಸಿದರು.
ಜಿಲ್ಲಾ ಪಂಚಾಯತ್, ಜಿಲ್ಲಾ ಪೋಲೀಸ್ ಇಲಾಖೆ, ಸಮಾಜ ಕಲ್ಯಾಣ ಇಲಾಖೆಯ ಸಹಭಾಗಿತ್ವದಲ್ಲಿ ಆಯೋಜಿಸಿದ್ದು ಸಹಾಯಕ ಆಯುಕ್ತರಾದ ಗಜಾನನ ಬಾಳೆರವರು ಹಸಿರು ನಿಶಾನೆ ತೋರಿಸುವ ಮೂಲಕ ರ‍್ಯಾಲಿಗೆ ಚಾಲನೆ ನೀಡಿದರು.
ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಸಿಂಧು ರಘು ಹೆಚ್.ಎನ್. ಮಾತನಾಡಿ, ಜಿಲ್ಲೆಯಿಂದ ಬೆಂಗಳೂರಿನ ವರೆಗೆ ರ‍್ಯಾಲಿ ನಡೆಸಿದ್ದು, ಕಳೆದ ಬಾರಿ ಮಾನವ ಸರಪಳಿ ನಿರ್ಮಿಸಿ ಸಂವಿಧಾನದ ಪೀಠಿಕೆ ಯನ್ನು ಓದುವ ಮೂಲಕ ಗಿನ್ನೀಸ್ ದಾಖಲೆ ಮಾಡಲಾಗಿತ್ತು.
ಈ ಬಾರಿ ಪ್ರತೀ ಜಿಲ್ಲೆಯಿಂದ ಹತ್ತು ಜನ ದ್ವಿಚಕ್ರ ವಾಹನ ಸವಾರರನ್ನು ಗುರುತಿಸಿ ರ‍್ಯಾಲಿ ಆಯೋಜಿಸಿದ್ದು, ಇಲ್ಲಿಂದ ಆಂದ್ರಪ್ರದೇಶದ ಮಂತ್ರಾಲಯ ಸುಕ್ಷೇತ್ರದಲ್ಲಿ ವಾಸ್ತವ್ಯ ಮಾಡಿ ನಂತರ ರಾಜಧಾನಿಯ ವಿಧಾನಸೌಧತ್ತ ಹೊರಟು ಬೆಂಗಳೂರಿಗೆ ಸೆ.14 ದಂದು ತಲುಪಲಿದ್ದು, ಸೆ.15 ರಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯನವರು ಬೈಕ್ ರೈಡರ್ಸ್ ಗಳಿಗೆ ಸನ್ಮಾನಿಸಲಿರುವರು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಪತ್ರಾಂಕಿತ ವ್ಯವಸ್ಥಾಪಕ ರವಿಕುಮಾರ, ರವಿಂದ್ರ, ಶಿವಪ್ಪ, ರಾಜಶ್ರೀ ಉಪಸ್ಥಿತರಿದ್ದರು.







