Raichuru | ಯುವಕನ ಬರ್ಬರ ಹತ್ಯೆ ಪ್ರಕರಣ: 24 ಗಂಟೆಯೊಳಗೆ ಆರೋಪಿಗಳ ಬಂಧನ

ಕೊಲೆಯಾದ ತಿರುಪತಿ |ಬಂಧಿತ ಆರೋಪಿಗಳಾದ ರಾಜು, ಆವೇಶ್
ರಾಯಚೂರು: ನಗರದ ಕುಲಸುಂಬಿ ಕಾಲನಿಯಲ್ಲಿ ಯುವಕನ ರುಂಡ ಕತ್ತರಿಸಿ ಭೀಕರವಾಗಿ ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಕೃತ್ಯ ಬೆಳಕಿಗೆ ಬಂದ 24 ಗಂಟೆಯ ಒಳಗೆ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಆವೇಶ್ (25) ಹಾಗೂ ರಾಜು (26) ಬಂಧಿತ ಆರೋಪಿಗಳು. ಕೊಲೆಯಾದ ತಿರುಪತಿ ಹಾಗೂ ಬಂಧಿತ ಇಬ್ಬರು ಆರೋಪಗಳು ಸ್ನೇಹಿತರು ಹಾಗೂ ಸಂಬಂಧಿಕರಾಗಿದ್ದರು. ಮೂವರು ಒಟ್ಟಿಗೆ ಓಡಾಡುತ್ತಿದ್ದರು, ಆಗಾಗ ಸಣ್ಣಪುಟ್ಟ ಜಗಳವಾಡುತ್ತಿದ್ದರು. ಕೊಲೆಯಾದ ದಿನ ಶುಕ್ರವಾರವೂ ಒಟ್ಟಿಗೆ ಊಟ ಮಾಡಿದ್ದರು. ಇತ್ತೀಚೆಗೆ ತಿರುಪತಿಯು ಆರೋಪಿ ಆವೇಶ್ ನ ಮೊಬೈಲ್ ಕೇಳಿದ್ದ. ಆದರೆ ಆತ ಕೊಡದೇ ಇದ್ದಾಗ ಇವರೊಳಗೆ ಜಗಳವಾಗಿತ್ತು, ಇದೇ ವಿಚಾರ ಕೊಲೆಗೆ ಕಾರಣವಾಗಿರಬಹುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಶು ಗಿರಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ಪ್ರಕರಣದ ವಿವರ: ಶುಕ್ರವಾರ ರಾತ್ರಿ ತಿರುಪತಿಯನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಲೆ ಮಾಡಿ ರುಂಡವನ್ನು ತಿರುಪತಿಯ ಮನೆಯ ಸಮೀಪವೇ ಎಸೆದಿದ್ದರು. ಮನೆಯ ಬಾಗಿಲು ಹೊರಗಿನಿಂದ ಮುಚ್ಚಿ ಹೋಗಿದ್ದರಿಂದ ಯಾರ ಗಮನಕ್ಕೂ ಬಂದಿರಲಿಲ್ಲ. ರವಿವಾರ ಮನೆಯಿಂದ ವಾಸನೆ ಬರುತ್ತಿದ್ದ ಕಾರಣ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೃತರ ತಂದೆ ಯಂಕಪ್ಪ (50) ದೂರು ನೀಡಿರುವ ದೂರಿನಂತೆಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ವಿಚಾರಣೆ ಕೈಗೆತ್ತಿಕೊಂಡಿದ್ದರು. ಆರೋಪಿಗಳಾದ ಆವೇಶ್ ಹಾಗೂ ಆತನ ಸಹೋದರ ರಾಜುವಿನ ಮೇಲೆ ಸಂಶಯ ಬಂದು ವಿಚಾರಣೆ ಮಾಡಿದಾಗ ಕೊಲೆ ಕೃತ್ಯವನ್ನು ಒಪ್ಪಿಕೊಂಡಿದ್ದಾರೆ ಎಂದು ಅರುಣಾಂಶು ಗಿರಿ ತಿಳಿಸಿದರು.
ಡಿವೈಎಸ್ಪಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1 ಮತ್ತು 2ರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿದ ತಂಡವು ಆರೋಪಗಳನ್ನು ಬಂಧಿಸಿದೆ. ತನಿಖೆ ಮುಂದುವರಿದಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪಿಎಸ್ಸೈಗಳಾದ ಸಣ್ಣ ವಿರೇಶ್, ಪ್ರಕಾಶ ಡಂಬಳ, ಲಕ್ಷ್ಮೀದೇವಿ, ಸುನೀಲ್, ಮುಹಮ್ಮದ್ ಇಸಾಕ್, ಬಸವರಾಜ ಸೇರಿದಂತೆ ಹಲವು ಅಧಿಕಾರಿಗಳು ಭಾಗವಹಿಸಿದ್ದರು.






