Raichur | ‘ಬುದ್ಧ ಪ್ರಜ್ಞಾ ಮಕ್ಕಳ ಮೈತ್ರಿ–2026’ ಉತ್ಸವ ಕಾರ್ಯಕ್ರಮ
ಬುದ್ಧ–ಬಸವ–ಅಂಬೇಡ್ಕರ್ ಚಿಂತನೆಗಳ ಸಂದೇಶ

ರಾಯಚೂರು: ಮಕ್ಕಳಲ್ಲಿ ಜ್ಞಾನ, ವೈಚಾರಿಕತೆ, ಸೃಜನಶೀಲತೆ, ಮಾನವೀಯತೆ ಹಾಗೂ ಸಮಾನತೆಯ ಮನೋಭಾವ ಬೆಳೆಸುವ ಉದ್ದೇಶದಿಂದ ಆಯೋಜಿಸಲಾದ ‘ಬುದ್ಧ ಪ್ರಜ್ಞಾ ಮಕ್ಕಳ ಮೈತ್ರಿ–2026’ ಉತ್ಸವದ ಎರಡನೇ ದಿನವೂ ಮಕ್ಕಳ ಪ್ರತಿಭೆ, ವೈಚಾರಿಕ ಚಿಂತನೆ ಹಾಗೂ ಸಾಂಸ್ಕೃತಿಕ ವೈವಿಧ್ಯತೆ ಗಮನ ಸೆಳೆಯಿತು.
ನಗರದ ಪಂಡಿತ್ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರ ಹಾಗೂ ಲುಂಬಿನಿ ಸಭಾಂಗಣ–ಧಮ್ಮ ಸಂಸತ್‌ನಲ್ಲಿ rವಾರ ನಡೆದ ಕಾರ್ಯಕ್ರಮಕ್ಕೆ ಬುದ್ಧವಂದನೆ, ತ್ರಿಶರಣ ಪಠಣ ಹಾಗೂ ದೀಪಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಲಾಯಿತು. ಸಂತೋಷ ನಂದಿನಿ ದೀಪಜ್ಯೋತಿ ಬೆಳಗಿಸಿದರೆ, ಷಣ್ಮುಖಪ್ಪ, ಮಾತೆ ಗೌತಮಿ ಹಾಗೂ ಧಮ್ಮಚಾರಿಗಳು ಬುದ್ಧ ಮತ್ತು ಡಾ.ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸಿದರು.
ಉತ್ಸವದ ಪ್ರಮುಖ ಆಕರ್ಷಣೆಯಾಗಿ ಮಕ್ಕಳೇ ವೇದಿಕೆ ನಿರೂಪಣೆ ನಡೆಸಿದರು. ಬುದ್ಧನ ಧಮ್ಮ ಹಾಗೂ ಮಾನವೀಯ ಮೌಲ್ಯಗಳ ಕುರಿತು ಮಕ್ಕಳು ಇಂಗ್ಲಿಷ್‌ನಲ್ಲಿ ಆತ್ಮವಿಶ್ವಾಸದಿಂದ ಮಾತನಾಡಿ ನೆರೆದಿದ್ದವರ ಮೆಚ್ಚುಗೆ ಪಡೆದರು. ಮಕ್ಕಳ ನಿರೂಪಣೆ, ವಿಚಾರ ಮಂಡನೆ ಮತ್ತು ಸಾಂಸ್ಕೃತಿಕ ಪ್ರದರ್ಶನಗಳು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ತಂದವು.
ಮೈಸೂರು, ಕಲಬುರಗಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ರಾಯಚೂರು ಜಿಲ್ಲೆಯ ಗ್ರಾಮೀಣ ಮತ್ತು ನಗರ ಪ್ರದೇಶಗಳಿಂದ ಆಗಮಿಸಿದ್ದ ಮಕ್ಕಳು ವೈವಿಧ್ಯಮಯ ವೇಷಭೂಷಣಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು.
ಮಧ್ಯಾಹ್ನ ನಡೆದ ಕಾರ್ಯಕ್ರಮದಲ್ಲಿ ‘ಬುದ್ಧ ಬೆಳಕು’ ನಾಟಕ ಸೇರಿದಂತೆ ಹಲವು ಸಾಂಸ್ಕೃತಿಕ ಪ್ರದರ್ಶನಗಳು ನಡೆದವು. ಮಕ್ಕಳ ಪ್ರತಿಭೆಗೆ ವೇದಿಕೆ ಕಲ್ಪಿಸುವುದರ ಜೊತೆಗೆ ಅವರಲ್ಲಿ ಆತ್ಮವಿಶ್ವಾಸ ಬೆಳೆಸುವ ಪ್ರಯತ್ನವೂ ನಡೆಯಿತು.
ಉತ್ಸವದಲ್ಲಿ ಮಕ್ಕಳಿಗೆ ಬುದ್ಧನ ಧಮ್ಮ, ಬಸವಣ್ಣನವರ ಕಾಯಕ–ದಾಸೋಹ ತತ್ವ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಅವರ ಸಮಾನತೆ, ಶಿಕ್ಷಣ ಮತ್ತು ಸ್ವಾಭಿಮಾನದ ಚಿಂತನೆಗಳನ್ನು ಪರಿಚಯಿಸುವ ಕಾರ್ಯಕ್ರಮಗಳು ಆಯೋಜಿಸಲಾಯಿತು. ಸಮಾಜದಲ್ಲಿ ಸಹೋದರತ್ವ, ಕರುಣೆ ಹಾಗೂ ಮಾನವೀಯ ಮೌಲ್ಯಗಳನ್ನು ಬಿತ್ತುವ ಆಶಯ ಕಾರ್ಯಕ್ರಮದ ಮೂಲಕ ವ್ಯಕ್ತವಾಯಿತು.
ಈ ವೇಳೆ ಪಶುವೈದ್ಯಕೀಯ ಇಲಾಖೆಯ ಷಣ್ಮುಖಪ್ಪ ಮಾತನಾಡಿ, ರಾಯಚೂರಿನಲ್ಲಿ ಮೊದಲ ಬಾರಿಗೆ ಶೋಷಿತ ಹಾಗೂ ಸ್ವಾಭಿಮಾನಿ ಸಮಾಜಗಳ ಮಕ್ಕಳಿಗಾಗಿ ಎರಡು ದಿನಗಳ ಕಾಲ ನಡೆಯುತ್ತಿರುವ ಈ ಉತ್ಸವ ಐತಿಹಾಸಿಕ ಕಾರ್ಯಕ್ರಮವಾಗಿದೆ ಎಂದರು. ಅಂಬೇಡ್ಕರ್ ಅವರ ಆದರ್ಶಗಳು ಹಾಗೂ ಸಾಮಾಜಿಕ ಪರಿವರ್ತನೆಯ ಚಿಂತನೆಗಳನ್ನು ಮಕ್ಕಳಿಗೆ ಪರಿಚಯಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು.
ಭಂತೆ ಸಂಘಪಾಲ್, ಧಮ್ಮಚಾರಿ ನರಸಿಂಹಲು, ದೇವಯ್ಯ (ಮೈಸೂರು), ಮೇಲ್ಕೋಡಿ ಮಹಾದೇವ ಸ್ವಾಮಿ ಹಾಗೂ ಸಂಗಡಿಗರು ಎರಡು ದಿನಗಳ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ವಿಚಾರ ವಿಕಾಸ ವೇದಿಕೆಯ ಜಿಲ್ಲಾಧ್ಯಕ್ಷ ಬಿ.ಎ. ದೊಡ್ಡಮನಿ, ಭಾರತೀಯ ಬೌದ್ಧ ಮಹಾಸಭಾದ ಜಿಲ್ಲಾಧ್ಯಕ್ಷ ವಿಜಯ ಪ್ರಸಾದ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.






