ರಾಯಚೂರು | ಕಟ್ಟಡ ವಾಲಿದ ಪ್ರಕರಣ: ಕಟ್ಟಡ ತೆರವು ಕಾರ್ಯಾಚರಣೆಗೆ ಮುಂದಾದ ಪಾಲಿಕೆ

ರಾಯಚೂರು: ನಗರದ ವಾರ್ಡ್ 8 ರಲ್ಲಿ ಎರಡು ಅಂತಸ್ತಿನ ಕಟ್ಟಡ ಮತ್ತೊಂದು ಕಟ್ಟಡದ ಮೇಲೆ ವಾಲಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾನಗರ ಪಾಲಿಕೆ ಅಧಿಕಾರಿಗಳು ಸೋಮವಾರ ಕಟ್ಟಡ ತೆರವು ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ.
ಪಾಲಿಕೆ ಎಂಜಿನಿಯರ್ ಬಸವರಾಜ ನೇತೃತ್ವದ ಅಧಿಕಾರಿಗಳ ತಂಡ ಜೆಸಿಬಿಗಳೊಂದಿಗೆ ಸ್ಥಳಕ್ಕೆ ತೆರಳಿ ಕಂಪೌಂಡ್ ತೆರವುಗೊಳಿಸಿದರು. ಕಟ್ಟಡ ಮಾಲಕರಿಗೆ ಕಳೆದ ಹತ್ತುದಿನ ಹಿಂದೆಯೇ ತೆರವುಗೊಳಿಸಲು ಸೂಚಿಸಿದ್ದರೂ, ತೆರವುಗೊಳಿಸದೇ ಇರುವದರಿಂದ ಸುತ್ತಮುತ್ತಲಿನ ನಿವಾಸಿಗಳು ಆತಂಕ ವ್ಯಕ್ತಪಡಿಸಿ ಪಾಲಿಕೆ ದೂರು ನೀಡಿದ್ದರು.
ಕಟ್ಟಡದ ಮಾಲಕರು ತೆರವುಗೊಳಿಸದೇ ಇರುವುದರಿಂದ ಪಾಲಿಕೆ ತೆರವಿಗೆ ಮುಂದಾಗಿತ್ತು. ಮಾಲಕರು ನಾಳೆಯೊಳಗೆ ಪೂರ್ಣವಾಗಿ ಕಟ್ಟಡ ತೆರವುಗೊಳಿಸಲು ಗಡವು ನೀಡಿದ್ದು, ಇಲ್ಲದೇ ಹೋದರೆ ಪಾಲಿಕೆಯಿಂದ ತೆರವುಗೊಳಿಸುವದಾಗಿ ಎಚ್ಚರಿಸಲಾಯಿತು. ಕಟ್ಟಡ ಪಕ್ಕದಲ್ಲಿರುವ ವ್ಯಾಪಾರಿ ಅಂಗಡಿಗಳನ್ನು ಸಹ ಖಾಲಿ ಮಾಡಿಸಲಾಯಿತು.
ಮುಹಮ್ಮದ್ ದಸ್ತಗೀರ ಎಂಬುವವರಿಗೆ ಸೇರಿ ಕಟ್ಟಡ ವಾಲಿನಿಂತಿದ್ದು, ಕುಸಿತ ಬೀಳುವ ಆತಂಕ ಉಂಟಾಗಿದೆ. ಕಟ್ಟಡ ಪಕ್ಕದ ಮನೆ ಮೇಲೆ ನಿಂತಿರುವುದು ಅವಘಡ ಸಂಭವಿಸುವ ಭಯ ಸೃಷ್ಟಿಯಾಗಿದೆ. ಮಾಲಕರು ಕಟ್ಟಡದ ಮೇಲ್ಬಾಗ ಮಾತ್ರ ತೆರವುಗೊಳಿಸಿ ಸುಮ್ಮನಾಗಿದ್ದರು.
ಪಾಲಿಕೆ ಅಧಿಕಾರಿಗಳು ಪೂರ್ಣವಾಗಿ ಕಟ್ಟಡ ತೆರವುಗೊಳಿಸುವಂತೆ ಸೂಚಿಸಿದ್ದಾರೆ. ನಾಳೆಯೊಳಗೆ ಸ್ವಯಂಪ್ರೇರಣೆಯಿಂದ ಕಟ್ಟಡ ತೆರವುಗೊಳಿಸಬೇಕು. ಇಲ್ಲದೆ ಹೋದಲ್ಲಿ ಪಾಲಿಕೆಯಿಂದ ತೆರವುಗೊಳಿಸಲಾಗುತ್ತದೆ ಎಂದು ಅಂತಿಮ ಎಚ್ಚರಿಕೆಯನ್ನು ನೀಡಿದ್ದಾರೆ







