Raichur | ಹಾಡುಹಗಲೇ ವ್ಯಾಪಾರಿ ಕೊಲೆ, ಮಾದಕ ವಸ್ತುಗಳ ಮಾರಾಟ ತಡೆಗೆ ಆಗ್ರಹಿಸಿ ಪ್ರತಿಭಟನೆ

ರಾಯಚೂರು: ನಗರದ ಎಲ್‌ಬಿಎಸ್ ನಗರದ ಬಡಾವಣೆಯಲ್ಲಿ ಕಿರಾಣಿ ವ್ಯಾಪಾರಿಯೊಬ್ಬರನ್ನು ಹಾಡುಹಗಲೇ ಮಚ್ಚಿನಿಂದ ಕೊಲೆ ಮಾಡಿದ ಪ್ರಕರಣ ಹಾಗೂ ಗಾಂಜಾ ಸೇರಿದಂತೆ ಮಾದಕ ವಸ್ತುಗಳ ಮಾರಾಟ ತಡೆಗೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯ (ಶಿವರಾಮೇಗೌಡ ಬಣ), ಜಿಲ್ಲಾ ಕನ್ನಡ ಕ್ರಿಯಾ ಸಮಿತಿ ಹಾಗೂ ಕನ್ನಡ ಮಿತ್ರಕೂಟಗಳ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
ನಗರದಲ್ಲಿ ಯುವಕರು ದುಶ್ಚಟಗಳಿಗೆ ಬಲಿಯಾಗಿ ಹಲ್ಲೆ, ದೌರ್ಜನ್ಯ ಹಾಗೂ ಕೊಲೆಗಳಂತಹ ಘಟನೆಗಳಲ್ಲಿ ತೊಡಗುತ್ತಿರುವುದು ಹೆಚ್ಚಾಗುತ್ತಿದೆ. ಇದರಿಂದ ಜನರು ಭಯದ ವಾತಾವರಣದಲ್ಲಿ ಬದುಕುವಂತಾಗಿದೆ. ಜಿಲ್ಲೆಯಲ್ಲಿ ದಲಿತ ಮಹಿಳೆಯರ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣಗಳು ಮಾಸುವ ಮುನ್ನವೇ ಹಾಡುಹಗಲೇ ವ್ಯಾಪಾರಿಯನ್ನು ಕೊಲೆ ಮಾಡಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಯಾವುದೇ ಭೀತಿಯಿಲ್ಲದೆ ಕೊಲೆ ಮಾಡುವ ಹಂತಕ್ಕೆ ವ್ಯವಸ್ಥೆ ತಲುಪಿರುವುದು ಆಘಾತಕಾರಿ ಸಂಗತಿಯಾಗಿದೆ. ಕೊಲೆ ಮಾಡಿದ ಆರೋಪಿಯನ್ನು ಬಂಧಿಸಲಾಗಿದ್ದರೂ ಇಂತಹ ಕೃತ್ಯಗಳು ಮರುಕಳಿಸದಂತೆ ಸೂಕ್ತ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ. ಜಿಲ್ಲೆಯಲ್ಲಿ ಗಾಂಜಾ ಮಾರಾಟ ಮತ್ತು ಸಾಗಣೆಯ ಜಾಲವನ್ನು ಪತ್ತೆಹಚ್ಚಿ, ಮಾದಕ ವಸ್ತುಗಳ ಹಾವಳಿಗೆ ಕೂಡಲೇ ಕಡಿವಾಣ ಹಾಕಬೇಕು. ಇಂತಹ ಘಟನೆಗಳು ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದರ ಜೊತೆಗೆ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಅಪರಾಧ ಕೃತ್ಯಗಳನ್ನು ನಿಯಂತ್ರಿಸಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಅಶೋಕಕುಮಾರ ಜೈಮ್, ರಾಮಣ್ಣ ಮ್ಯಾದಾರ, ರಫೀಕ್ ಅಹ್ಮದ್, ಕಿಷನರಾವ್, ಚಂದ್ರಶೇಖರ ಪೂರತಿಪ್ಲಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.






