Raichur | ಕಾಲುವೆ ನೀರು ಜಮೀನುಗಳಿಗೆ ನುಗ್ಗಿ ಹತ್ತಿ ಬೆಳೆ ಹಾನಿ; ಕೆಬಿಜೆಎನ್‌ಎಲ್ ವಿರುದ್ಧ ರೈತರ ಆಕ್ರೋಶ

ರಾಯಚೂರು : ದೇವದುರ್ಗ ತಾಲೂಕಿನ ಇಂಗಳದಾಳ ಗ್ರಾಮದಲ್ಲಿ ನಾರಾಯಣಪುರ ಬಲದಂಡೆ ಕಾಲುವೆ (ಎನ್‌ಆರ್‌ಬಿಸಿ)ಯ 17ನೇ ಉಪಕಾಲುವೆಯಿಂದ ನೀರು ಕೃಷಿ ಜಮೀನುಗಳಿಗೆ ನುಗ್ಗಿ ಹತ್ತಿ ಬೆಳೆ ಹಾನಿಗೊಳಗಾದ ಘಟನೆ ನಡೆದಿದೆ. ಅಧಿಕಾರಿಗಳ ನಿರ್ಲಕ್ಷ್ಯವೇ ಬೆಳೆ ಹಾನಿಗೆ ಕಾರಣ ಎಂದು ರೈತರು ಆರೋಪಿಸಿದ್ದಾರೆ.
ಕಾಲುವೆಯಲ್ಲಿ ಹೂಳು ತುಂಬಿರುವುದು ಹಾಗೂ ಗಿಡಗಂಟೆಗಳು ಬೆಳೆದಿದ್ದರೂ, ನೀರು ಹರಿಸುವ ಮುನ್ನ ಜಂಗಲ್ ಕಟ್ ಮತ್ತು ಸ್ವಚ್ಛತಾ ಕಾಮಗಾರಿ ಕೈಗೊಳ್ಳದ ಹಿನ್ನೆಲೆಯಲ್ಲಿ ನೀರು ಕಾಲುವೆಯಿಂದ ಹೊರಹೊಮ್ಮಿ ಇಂಗಳದಾಳ–ಬೂದಿನಾಳ ಸೀಮಾಂತರದ ಕೃಷಿ ಜಮೀನುಗಳಿಗೆ ನುಗ್ಗಿದೆ. ಪರಿಣಾಮವಾಗಿ ರೈತರು ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಬೆಳೆದಿದ್ದ ಹತ್ತಿ ಬೆಳೆ ಹಾನಿಯಾಗಿದೆ.
ಕೆಬಿಜೆಎನ್‌ಎಲ್ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಪರಿಸ್ಥಿತಿ ಉಂಟಾಗಿದೆ ಎಂದು ಆರೋಪಿಸಿದ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಅಧಿಕಾರಿಗಳು ಸ್ಥಳಕ್ಕೆ ಆಗಮಿಸುವ ಮುನ್ನವೇ ರೈತರು ಜೆಸಿಬಿ ಯಂತ್ರದ ಮೂಲಕ ಸ್ವತಃ ಕಾಲುವೆಯನ್ನು ಸ್ವಚ್ಛಗೊಳಿಸಿ ನೀರಿನ ಹರಿವಿಗೆ ಅವಕಾಶ ಮಾಡಿಕೊಟ್ಟರು.
ಹಾನಿಗೊಳಗಾದ ಬೆಳೆಗಳ ತಕ್ಷಣ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ನೀಡಬೇಕು. ಜೊತೆಗೆ ಕಾಲುವೆಗಳ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರೈತರು ಒತ್ತಾಯಿಸಿದರು.






