Raichur | ಜನಗಣತಿ ಕಾರ್ಯವನ್ನು ಶಿಸ್ತು, ಬದ್ಧತೆಯಿಂದ ನಿರ್ವಹಿಸಿ: ಡಾ.ಟಿ.ರೋಣಿ
ಜನಗಣತಿ 2027ರ ಸಿದ್ಧತೆಯ 2ನೇ ತರಬೇತಿ ಕಾರ್ಯಾಗಾರ

ರಾಯಚೂರು: ಜನಗಣತಿಯು ದೇಶದ ಅಭಿವೃದ್ಧಿ ಯೋಜನೆಗಳು ಹಾಗೂ ಭವಿಷ್ಯದ ಆಡಳಿತಾತ್ಮಕ ನಿರ್ಧಾರಗಳಿಗೆ ಪ್ರಮುಖ ಆಧಾರವಾಗಿದೆ. ಆದ್ದರಿಂದ ಜನಗಣತಿ ಕಾರ್ಯವನ್ನು ಶಿಸ್ತು ಮತ್ತು ಬದ್ಧತೆಯಿಂದ ನಿರ್ವಹಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಡಾ. ಟಿ. ರೋಣಿ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಜನಗಣತಿ–2027ರ ಸಿದ್ಧತೆಯ ಎರಡನೇ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜನಗಣತಿಯಲ್ಲಿ ಸಂಗ್ರಹಿಸುವ ಮಾಹಿತಿಯು ವಿವಿಧ ಅಭಿವೃದ್ಧಿ ಯೋಜನೆಗಳ ರೂಪುರೇಷೆ ಸಿದ್ಧಪಡಿಸಲು ಪ್ರಮುಖ ಆಧಾರವಾಗುತ್ತದೆ. ಪ್ರತಿಯೊಂದು ಕುಟುಂಬದ ಮಾಹಿತಿಯನ್ನು ಯಾವುದೇ ಲೋಪಗಳಿಲ್ಲದೆ ನಿಖರವಾಗಿ ಸಂಗ್ರಹಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಸಾರ್ವಜನಿಕರಿಗೆ ಜನಗಣತಿಯ ಉದ್ದೇಶ ಮತ್ತು ಮಹತ್ವದ ಕುರಿತು ಅರಿವು ಮೂಡಿಸಬೇಕು. ಯಾವುದೇ ಮನೆ ಅಥವಾ ಕುಟುಂಬ ಗಣತಿಯಿಂದ ಹೊರಗುಳಿಯದಂತೆ ಗಮನಹರಿಸಬೇಕು. ಸಂಗ್ರಹಿಸುವ ಮಾಹಿತಿಯ ಗೌಪ್ಯತೆಯನ್ನು ಕಾಪಾಡಬೇಕು ಎಂದು ತಿಳಿಸಿದರು.
ಮೊದಲ ಹಂತದ ಮನೆಪಟ್ಟಿ ಮತ್ತು ಮನೆಗಣತಿ ಕಾರ್ಯ ಪೂರ್ಣಗೊಂಡಿದ್ದು, ಎರಡನೇ ಹಂತದ ಜನಸಂಖ್ಯಾ ಗಣತಿ ಕಾರ್ಯ ಮಹತ್ವದ್ದಾಗಿದೆ. 2027ರ ಜನವರಿ 10ರಿಂದ 24ರವರೆಗೆ ಸ್ವಯಂ ಗಣತಿ ನಡೆಯಲಿದ್ದು, ಜನವರಿ 25ರಿಂದ ಫೆಬ್ರವರಿ 28ರವರೆಗೆ ಗಣತಿದಾರರು ಮನೆಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಿದ್ದಾರೆ. ಫೆಬ್ರವರಿ 28ರಂದು ವಸತಿರಹಿತ ಜನರ ಗಣತಿ ನಡೆಯಲಿದೆ. 2027ರ ಮಾರ್ಚ್ 1ರಿಂದ 5ರವರೆಗೆ ಪರಿಷ್ಕರಣೆ ಸುತ್ತು ನಡೆಯಲಿದೆ ಎಂದು ಮಾಹಿತಿ ನೀಡಿದರು.
ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೃಷ್ಣ ಶಾವಂತಗೇರಾ ಮಾತನಾಡಿ, ಸರ್ಕಾರವು ನಮ್ಮ ಹೆಗಲಿಗೆ ಅತ್ಯಂತ ಮಹತ್ವದ ಜನಗಣತಿ ಕಾರ್ಯದ ಜವಾಬ್ದಾರಿಯನ್ನು ನೀಡಿದೆ. ಈ ನಿಟ್ಟಿನಲ್ಲಿ ಈಗಾಗಲೇ ಹಲವು ಹಂತಗಳ ತರಬೇತಿ ಹಾಗೂ ಮನೆಪಟ್ಟಿ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ಮುಂದಿನ ಮೂರು ದಿನಗಳ ಕಾಲ ನಡೆಯಲಿರುವ ಈ ತರಬೇತಿಯನ್ನು ಪ್ರತಿಯೊಬ್ಬರೂ ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ಪಡೆದುಕೊಳ್ಳಬೇಕು ಎಂದರು.
ಉತ್ತಮ ಕೇಳುಗರು ಮಾತ್ರ ಉತ್ತಮ ಭಾಷಣಕಾರರಾಗಲು ಸಾಧ್ಯ. ಆದ್ದರಿಂದ ಎಲ್ಲರೂ ಉತ್ತಮ ಕೇಳುಗರಾಗಿ ತರಬೇತಿಯಲ್ಲಿ ನೀಡಲಾಗುವ ಪ್ರತಿಯೊಂದು ಮಾಹಿತಿಯನ್ನು ಸರಿಯಾಗಿ ಗ್ರಹಿಸಬೇಕು. ಆಗ ಮಾತ್ರ ತಮ್ಮ ಹಂತದಲ್ಲಿ ಗಣತಿದಾರರು ಮತ್ತು ಮೇಲ್ವಿಚಾರಕರಿಗೆ ಪರಿಣಾಮಕಾರಿಯಾಗಿ ತರಬೇತಿ ನೀಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಸೈದ್ಧಾಂತಿಕ ವಿಷಯಗಳಿಗಿಂತ ಕ್ಷೇತ್ರಮಟ್ಟದಲ್ಲಿ ಎದುರಾಗುವ ಪ್ರಾಯೋಗಿಕ ಸವಾಲುಗಳು ಮತ್ತು ಸಂದೇಹಗಳು ಭಿನ್ನವಾಗಿರುತ್ತವೆ. ತರಬೇತಿ ಸಾಹಿತ್ಯದಲ್ಲಿರುವ ಅಂಶಗಳನ್ನು ಸರಿಯಾಗಿ ಅರ್ಥಮಾಡಿಕೊಂಡು, ಕ್ಷೇತ್ರ ಕಾರ್ಯದಲ್ಲಿ ಗಣತಿದಾರರು ಮತ್ತು ಮೇಲ್ವಿಚಾರಕರಿಗೆ ಎದುರಾಗುವ ಸಮಸ್ಯೆಗಳಿಗೆ ತಕ್ಷಣ ಪರಿಹಾರ ನೀಡುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು. ಈ ಮೂಲಕ ಎಲ್ಲರೂ ಸಮರ್ಥ ಮಾಸ್ಟರ್ ಟ್ರೈನರ್‌ಗಳಾಗಿ ರೂಪುಗೊಂಡು ರಾಷ್ಟ್ರೀಯ ಕಾರ್ಯವನ್ನು ಯಶಸ್ವಿಗೊಳಿಸಬೇಕು. ಈ ನಿಟ್ಟಿನಲ್ಲಿ ನಿಮ್ಮೆಲ್ಲರ ಸಾಮರ್ಥ್ಯದ ಬಗ್ಗೆ ಸಂಪೂರ್ಣ ವಿಶ್ವಾಸವಿದೆ ಎಂದರು.
ಕಾರ್ಯಕ್ರಮದಲ್ಲಿ ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ವಿಭಾಗದ ಸಹಾಯಕ ನಿರ್ದೇಶಕ ಬಸವರಾಜ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ತಿಪ್ಪಣ್ಣ, ಜನಗಣತಿಯ ರಾಜ್ಯ ನೋಡಲ್ ಅಧಿಕಾರಿಗಳಾದ ಸುದರ್ಶನ ಮತ್ತು ಶ್ರೀ ರಾಮಲು, ಹೆಚ್ಚುವರಿ ನೋಡಲ್ ಅಧಿಕಾರಿ ಬೇಗಂ, ಜಿಲ್ಲಾ ಮಾಸ್ಟರ್ ಟ್ರೈನರ್ ಸದ್ದಾಶಿವಪ್ಪ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಉಪನ್ಯಾಸಕರು, ಶಿಕ್ಷಕರು ಹಾಗೂ ಜಿಲ್ಲಾಧಿಕಾರಿಗಳ ಕಚೇರಿಯ ಅಧಿಕಾರಿ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.






