Raichuru | ಹೋಟೆಲ್ ನಲ್ಲಿ ಅಸ್ಪೃಶ್ಯತೆ ಆರೋಪ: ಪ್ರಕರಣ ದಾಖಲು

ಲಿಂಗಸುಗೂರು, ಸೆ.10: ತಾಲೂಕಿನ ಈಚನಾಳ ಗ್ರಾಮದಲ್ಲಿ ಹೋಟೆಲ್ ನಲ್ಲಿ ಅಸ್ಪೃಶ್ಯತೆ ಆಚರಿಸಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಹೋಟೆಲ್ ಮಾಲಕ ಶಿವಪ್ಪ ಶರಣಪ್ಪ ಹಡಪದ ಎಂಬವರ ವಿರುದ್ಧ ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮದ ಅಮರಪ್ಪ ಗಾಳಪೂಜಿ ಎಂಬವರು ನೀಡಿದ ದೂರಿನ ಆಧಾರದ ಮೇಲೆ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರವೀಂದ್ರ ಉಪ್ಪಾರ ಅವರು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಅಸ್ಪೃಶ್ಯತೆ ಆಚರಣೆಗೆ ಸಂಬಂಧಿಸಿ ವೈರಲ್ ಆಗಿರುವ ವರ್ಷದ ಹಿಂದಿನ ವಿಡಿಯೋವೊಂದರಲ್ಲಿ ಆರೋಪಿ ತನ್ನ ಹೋಟೆಲ್ ನಲ್ಲಿ ದಲಿತ ಗ್ರಾಹಕನಿಗೆ ಕುಡಿಯುವ ನೀರನ್ನು ಗ್ಲಾಸ್ ಅಥವಾ ಲೋಟದಲ್ಲಿ ನೀಡದೆ ಮೇಲಿಂದ ಕೈಗೆ ಸುರಿಯುತ್ತಿರುವ ದೃಶ್ಯವಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Next Story




