Raichur | ದೇವಸ್ಥಾನದ ಕಟ್ಟೆ ಮೇಲೆ ಕುಳಿತಿದ್ದಕ್ಕೆ ಜಾತಿ ನಿಂದನೆ, ಹಲ್ಲೆ ಆರೋಪ; ಐವರ ವಿರುದ್ಧ FIR ದಾಖಲು

ಲಿಂಗಸುಗೂರು: ತಾಲೂಕಿನ ಈಚನಾಳ ಗ್ರಾಮದಲ್ಲಿ ಗದ್ದೆಮ್ಮ ದೇವಸ್ಥಾನದ ಕಟ್ಟೆ ಮೇಲೆ ಕುಳಿತಿದ್ದ ಕಾರಣಕ್ಕೆ ಇಬ್ಬರ ಮೇಲೆ ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ಐವರ ವಿರುದ್ಧ ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮದ ಸಂಗಪ್ಪ ಎಂಬುವವರು ಗದ್ದೆಮ್ಮ ದೇವಸ್ಥಾನದ ಕಟ್ಟೆ ಮೇಲೆ ಕುಳಿತಿದ್ದ ವೇಳೆ ಯಮನೂರು, ರಮೇಶ, ತಿಮ್ಮಣ್ಣ, ಬಸವರಾಜ ಹಾಗೂ ರವಿ ಎಂಬವರು ಅವರನ್ನು ಜಾತಿ ಹೆಸರಿನಿಂದ ನಿಂದಿಸಿ, ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಘಟನೆಯನ್ನು ಕಂಡು ಗಲಾಟೆಯನ್ನು ಬಿಡಿಸಲು ಮುಂದಾದ ಸಂಗಪ್ಪ ಅವರ ಅಣ್ಣ ಗದ್ದೆಪ್ಪ ಅವರ ಮೇಲೂ ಆರೋಪಿಗಳು ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಜಾತಿ ನಿಂದನೆ, ಹಲ್ಲೆ ಸೇರಿದಂತೆ ವಿವಿಧ ಆರೋಪಗಳಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.
ಗ್ರಾಮದಲ್ಲಿ ಇಂತಹ ಘಟನೆಗಳು ಮರುಕಳಿಸುತ್ತಿರುವುದು ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ. ಘಟನೆ ಕುರಿತು ಪೊಲೀಸರು ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದಲಿತ ಮುಖಂಡರು ಒತ್ತಾಯಿಸಿದ್ದಾರೆ.






