ರಾಯಚೂರು | ಜು.13ರಂದು ಪಂಡಿತ ಪಂಚಾಕ್ಷರಿ ಗವಾಯಿಗಳ ಪುಣ್ಯ ದಿನಾಚರಣೆ

ರಾಯಚೂರು: ನಗರದ ಗಣದಿನ್ನಿ ಕಲ್ಯಾಣ ಮಂಟಪದಲ್ಲಿ ಜು.13ರಂದು ಬೆಳಿಗ್ಗೆ 9ಗಂಟೆಗೆ ಪಂಡಿತ ಪಂಚಾಕ್ಷರಿ ಗಾವಾಯಿಗಳ ಸಂಸ್ಥೆಯಿಂದ ಪಂಡಿತ ಪಂಚಾಕ್ಷರಿ ಗವಾಯಿಗಳ ಪುಣ್ಯ ದಿನಾಚರಣೆ ಮತ್ತು 45ನೇ ವರ್ಷದ ಸಂಗೀತ ಸಮ್ಮೇಳನ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಸೂಗೂರೇಶ ಅಸ್ಕಿಹಾಳ ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಾರ್ಯಕ್ರಮದ ಸಾನಿಧ್ಯವನ್ನು ಕಿಲ್ಲೆಬೃಹನ್ಮಠದ ಶ್ರೀ ಶಾಂತಮಲ್ಲಶಿವಾಚಾರ್ಯರು, ಸೋಮವಾರಪೇಟೆ ಹಿರೇಮಠದ ಶ್ರೀ ಅಭಿನವ ರಾಚೋಟಿವೀರ ಶಿವಾಚಾರ್ಯರು, ಗಬ್ಬೂರಿನ ಶ್ರೀಬೂದಿಬಸವೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಣ್ಣ ನೀರಾವರಿ ಖಾತೆ ಸಚಿವ ಎನ್.ಎಸ್.ಬೋಸರಾಜ, ಸಂಸದ ಜಿ.ಕುಮಾರನಾಯಕ, ನಗರದ ಶಾಸಕ ಡಾ.ಶಿವರಾಜಪಾಟೀಲ್, ಬಸನಗೌಡ ದದ್ದಲ್, ವೀರಶೈವ ಮಹಾಸಭಾ ಅಧ್ಯಕ್ಷ ಚಂದ್ರಶೇಖರ ಪಾಟೀಲ್ ಮಿರ್ಜಾಪುರು, ಕೆಓಎಪ್ ಮಾಜಿ ಅಧ್ಯಕ್ಷ ಮಹಾಂತೇಶ ಪಾಟೀಲ್ ಅತ್ತನೂರು ಆಗಮಿಸಲಿದ್ದಾರೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಗದಗ ವೀರೇಶ್ವರ ಆಶ್ರಮದ ಶ್ರೀ ಕಲ್ಲಯ್ಯ ಅಜ್ಜ ಅವರಿಗೆ ತುಲಾಭಾರ ನೆರವೇರಿಸಲಾಗುತ್ತಿದೆ. ಸಂಗೀತಾ ಸಮ್ಮೇಳನದಲ್ಲಿ ವಿಶ್ವನಾಥ ನಾಕೋಡ್, ಪುಣೆಯ ನಾಗೇಶ ಅಡಗಾಂವಕರ್, ಕೃತಿಕಾ ಜಂಗಿನಮಠ, ಕೊಲ್ಕತ್ತಾದ ಪ್ರಣಮಿತ ರಾಯ್, ಕಾರ್ತಿಕೇಯ ಜಂಗಿನಮಠ ವಿಜಯಪುರ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ಅಲ್ಲದೇ ಜಿಲ್ಲೆಯ ಅನೇಕ ಸಂಗೀತ ಕಲಾವಿದರಿಂದಲೂ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.
ಪಂಡಿತ ಡಾ.ನರಸಿಂಹಲು ವಡವಾಟಿ, ಇಬ್ರಾಹಿಂ ಜಿ., ವೆಂಕಟೇಶ ಆಲ್ಕೋಡ, ಸುಧಾಕರ ಅಸ್ಕಿಹಾಳ, ವಿಜಯಕುಮಾರ ದಿನ್ನಿ, ಎಂ.ಸುಭಾಷ ಅಸ್ಕಿಹಾಳ, ರಾಘವೇಂದ್ರ ಆಶಾಪೂರ ಪತ್ರಿಕಾಗೋಷ್ಠಿಯಲ್ಲಿದ್ದರು







