ರಾಯಚೂರು | ಮಾನ್ವಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಅವ್ಯವಸ್ಥೆ : ಅಧಿಕಾರಿಗಳ ವಿರುದ್ಧ ಆಕ್ರೋಶ

ರಾಯಚೂರು : ಜಿಲ್ಲೆಯ ಮಾನ್ವಿ ತಾಲೂಕಿನ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರ ನೀಡುತ್ತಿಲ್ಲ. ಮೂಲಭೂತ ಸೌಲಭ್ಯಗಳಿಲ್ಲದೇ ವಿದ್ಯಾರ್ಥಿಗಳ ಕಲಿಕೆಗೆ ತೊಡಕಾಗಿದೆ ಎಂದು ಜನಸೇವಾ ಫೌಂಡೇಶನ್ ಆರೋಪಿಸಿದೆ.
ವಸತಿ ನಿಲಯದಲ್ಲಿ ಬೆಡ್ ಶೀಟ್ ಗಳು ಹಾಳಾಗಿವೆ, ಅಸ್ವಚ್ಛತೆ ತಾಂಡವವಾಡುತ್ತಿದೆ. ವಸತಿ ನಿಲಯದಲ್ಲಿ ಆಹಾರ ಪದಾರ್ಥಗಳು ಕೊಳೆತಿದ್ದು, ಅದನ್ನೇ ಬಳಸಲಾಗುತ್ತಿದೆ. ಶೌಚಾಲಯಗಳ ನಿರ್ವಹಣೆ ಸರಿಯಾಗಿ ಮಾಡುತ್ತಿಲ್ಲ. ಸ್ವಚ್ಛತೆ, ನೈರ್ಮಲ್ಯ ಇಲ್ಲದಂತಾಗಿದೆ. ಕುರಿಗಳಂತೆ ಮಕ್ಕಳನ್ನು ಕೂಡಿ ಹಾಕಿದಂತಾಗಿದೆ ಎಂದು ಜನಸೇವಾ ಫೌಂಡೇಶನ್ ಆರೋಪಿಸಿದೆ.
ಇಂದು ಜನಸೇವಾ ಫೌಂಡೇಶನ್ ರಾಜ್ಯಾಧ್ಯಕ್ಷ ಜಾವೀದ್ ಖಾನ್ ನೇತೃತ್ವದಲ್ಲಿ ವಸತಿ ನಿಲಯಕ್ಕೆ ಭೇಟಿ ನೀಡಿ, ವಸತಿ ನಿಲಯದ ವಸ್ತುಸ್ಥಿತಿಯ ಬಗ್ಗೆ ದೃಶ್ಯಗಳನ್ನು ಸೆರೆಹಿಡಿದು ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.
ವಸತಿ ನಿಲಯದ ವಿದ್ಯಾರ್ಥಿಗಳಿಗೆ ಕೊಡುವ ಸೌಲಭ್ಯಗಳು ನೋಡಿದರೆ ತುಂಬ ದುಃಖ ಆಗುತ್ತದೆ. ವಿದ್ಯಾರ್ಥಿಗಳು ಓದಿ ದೇಶಕ್ಕೆ ಹೆಸರು ತರುವ ಭವಿಷ್ಯ ಅವರದ್ದು, ಅಪೌಷ್ಟಿಕತೆಯಿಂದ ಹಾಸ್ಟೆಲ್ ನಲ್ಲಿ ನೆರಳಿ ಸಾಯುವಂತ ಬಡವರ ಮಕ್ಕಳ ಪರಿಸ್ಥಿತಿಯಾಗಿದೆ. ಹಾಸ್ಟೆಲ್ ನಲ್ಲಿ ಅಡುಗೆ ಮಾಡುವ ಅನ್ನ ಮತ್ತು ಅಲ್ಲಿ ಕೊಡುವಂತ ಪೌಷ್ಟಿಕ ಆಹಾರ ಮಕ್ಕಳು ಯಾರು ತಿನ್ನುವುದಿಲ್ಲ, ಪ್ರಾಣಿಗಳಿಗೆ ಮಾರಿಕೊಂಡು ತಿನ್ನುವ ಪರಿಸ್ಥಿತಿ ಪ್ರಾಂಶುಪಾಲರು ಮತ್ತು ಆಡಳಿತ ಮಂಡಳಿದ್ದಾಗಿದೆ.
ಮಕ್ಕಳು ಮಲಗುವ ಆಸನಗಳು ನೋಡಿದರೆ, ಕಣ್ಣಲ್ಲಿ ನೀರು ಬರುತ್ತೆ ಬಡವರ ಮಕ್ಕಳ ಅಂದರೆ ಇವರಿಗೆ ಕಾಳಜಿಯೇ ಇಲ್ಲ. ಅಲ್ಲಿನ ಶೌಚಾಲಯಗಳು ನೋಡಿದರೆ ಮಕ್ಕಳು ಯಾರು ಶೌಚಾಲಯದಲ್ಲಿ ಹೋಗೋದೇ ಇಲ್ಲ, ಬಯಲೇ ಗತಿ ಎಂದು ವಾಗ್ದಾಳಿ ನಡೆಸಿದ್ದಾರೆ.
ಅಲ್ಪಸಂಖ್ಯಾತರ ಸಚಿವ ಬಿ.ಝೆಡ್.ಜಮೀರ್ ಅಹ್ಮದ್ ಖಾನ್ ಅವರು, ಅಲ್ಪಸಂಖ್ಯಾತರ ಬಗ್ಗೆ ದೊಡ್ಡ ಭಾಷಣಗಳನ್ನು ಮಾಡುತ್ತಾರೆ. ಅದರೆ ಮಕ್ಕಳ ಸಮಸ್ಯೆಗಳ ಬಗ್ಗೆಯೋ ಕಾಳಜಿ ವಹಿಸಲಿ ಎಂದು ಮನವಿ ಮಾಡಿದರು.







